ಏಕಕಾಲಕ್ಕೆ ಚುನಾವಣೆ: ರಾಷ್ಟ್ರಪತಿ ಒಲವು
ಹೊಸದಿಲ್ಲಿ,ಜ.25: ಸಂಸತ್ತು ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಯ ಅಗತ್ಯವನ್ನು ಇಂದಿಲ್ಲಿ ಬಲವಾಗಿ ಪ್ರತಿಪಾದಿಸಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ನೋಟು ರದ್ದತಿ ಕ್ರಮಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದರು. ಇವೆರಡೂ ಸರಕಾರವು ತನ್ನ ಗಮನವನ್ನು ಕೇಂದ್ರೀಕರಿಸಿರುವ ಪ್ರಮುಖ ವಿಷಯಗಳಾಗಿವೆ.
ಏಕಕಾಲಕ್ಕೆ ಚುನಾವಣೆ ನಡೆಸುವ ಪರಿಕಲ್ಪನೆಯ ಬಗ್ಗೆ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆಗಳನ್ನು ಮುಂದುವರಿಸುವಂತೆ ಅವರು ಚುನಾವಣಾ ಆಯೋಗಕ್ಕೆ ಸೂಚಿಸಿದರು.
ಗಣರಾಜ್ಯೋತ್ಸವದ ಮುನ್ನಾದಿನ ರಾಷ್ಟ್ರವನ್ನುದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ದೇಶದ ಶಕ್ತಿಯು ಬಹುತ್ವ ಮತ್ತು ವೈವಿಧ್ಯತೆಯಲ್ಲಿ ಅಡಗಿದೆ ಎಂದು ಒತ್ತಿ ಹೇಳಿದರಲ್ಲದೆ, ದೇಶವು ಸಾಂಪ್ರದಾಯಿಕವಾಗಿ ಆರೋಗ್ಯಕರ ಚರ್ಚೆಗೆ ಪುರಸ್ಕಾರ ನೀಡಿದೆಯೇ ಹೊರತು ಅಸಹಿಷ್ಣುತೆಗಲ್ಲ ಎಂದರು.
ನಮ್ಮ ದೇಶದಲ್ಲಿ ಶತಮಾನಗಳಿಂದಲೂ ಹಲವಾರು ಅಭಿಪ್ರಾಯಗಳು,ಚಿಂತನೆಗಳು ಮತ್ತು ತತ್ವಜ್ಞಾನಗಳು ಪರಸ್ಪರ ಪೈಪೋಟಿ ನಡೆಸಿಕೊಂಡು ಬಂದಿವೆ. ಪ್ರಜಾಪ್ರಭುತ್ವವು ಹುಲುಸಾಗಿ ಬೆಳೆಯಲು ಬುದ್ಧಿವಂತ ಮತ್ತು ವಿವೇಚನಾಪೂರ್ಣ ಮನಸ್ಸುಗಳ ಅಗತ್ಯವಿದೆ ಎಂದ ಮುಖರ್ಜಿ, ಭಾರತೀಯ ಪ್ರಜಾಪ್ರಭುತ್ವದ ಸದೃಢತೆಗೆ ಒತ್ತು ನೀಡಿದರಾದರೂ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಕಲಾಪ ವ್ಯತ್ಯಯಗಳ ವಿರುದ್ಧ ಎಚ್ಚರಿಕೆ ನೀಡಿದರು.
ಇಷ್ಟಕ್ಕೇ ನಾವು ನೆಮ್ಮದಿಯಿಂದ ಇರಬೇಕಿಲ್ಲ. ನಂಬಿಕೆಯ ಸೌಧ ಇನ್ನಷ್ಟು ಬಲಗೊಳ್ಳಬೇಕಿದೆ. ಚುನಾವಣಾ ಸುಧಾರಣೆಗಳ ಕುರಿತು ರಚನಾತ್ಮಕ ಚರ್ಚೆಗಳಿಗೆ ಮತ್ತು ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳು ಏಕಕಾಲದಲ್ಲಿ ನಡೆಯುತ್ತಿದ್ದ ಸ್ವಾತಂತ್ರೋತ್ತರದ ಆರಂಭದ ದಶಕಗಳಲ್ಲಿದ್ದ ಪದ್ಧತಿಗೆ ಮತ್ತೆ ಮರಳಲು ಇದು ಸಕಾಲವಾಗಿದೆ ಎಂದರು.
ನೋಟು ರದ್ದತಿ ಕುರಿತಂತೆ ರಾಷ್ಟ್ರಪತಿಗಳು, ಸರಕಾರದ ಈ ಕ್ರಮ ‘ತಾತ್ಕಾಲಿಕ’ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿರಬಹುದು, ಆದರೆ ಅದು ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರಲಿದೆ ಎಂದು ಹೇಳಿದರು.





