ಕಾಶ್ಮೀರ: ನೀರ್ಗಲ್ಲು ಕುಸಿತಕ್ಕೆ ಯೋಧ ಸಹಿತ 5 ಬಲಿ
ಒಂದೇ ಕುಟುಂಬದ ನಾಲ್ವರು ಹಿಮಸಮಾಧಿ
ಶ್ರೀನಗರ,ಜ.25: ಕಾಶ್ಮೀರದಲ್ಲಿಂದು ಸಂಭ ವಿಸಿದ ನೀರ್ಗಲ್ಲು ಕುಸಿತದ ಎರಡು ಘಟನೆ ಗಳಲ್ಲಿ ಓರ್ವ ಯೋಧ ಹಾಗೂ ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಮೃತಪಟ್ಟಿದ್ದಾರೆ.
ನಿಯಂತ್ರಣ ರೇಖೆ ಸಮೀಪದ ಸೋನಾಮಾರ್ಗ್ ಎಂಬಲ್ಲಿ ಬೆಳಗಿನ ಜಾವ ಭಾರೀ ನೀರ್ಗಲ್ಲು ಸೇನಾ ಶಿಬಿರವನ್ನು ಅಪ್ಪಳಿಸಿದ್ದು, ಓರ್ವ ಯೋಧ ಸಾವನ್ನಪ್ಪಿದ್ದಾರೆ. ಇತರ ಇಬ್ಬರು ಯೋಧರು ನಾಪತ್ತೆಯಾಗಿದ್ದಾರೆ. ಅವಶೇಷಗಳಡಿಯಿಂದ ಮೃತ ಯೋಧನ ಶವವನ್ನು ಹೊರಕ್ಕೆ ತೆಗೆಯಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಭೀತಿ ವ್ಯಕ್ತವಾಗಿದೆ.
ನಿಯಂತ್ರಣ ರೇಖೆ ಸಮೀಪದ ಗುರೆಜ್ ವಿಭಾಗದ ತುಲೈಲ್ ಪ್ರದೇಶದ ಬಡೂಗಾಮ್ ಗ್ರಾಮದಲ್ಲಿ ಬುಧವಾರ ನಸುಕಿನಲ್ಲಿ ಮನೆಯೊಂದರ ಮೇಲೆ ನೀರ್ಗಲ್ಲು ಕುಸಿದು ಬಿದ್ದ ಪರಿಣಾಮ ಮನೆಯ ಮಾಲಕ ಮೆಹರಾಜ್-ಉದ್-ದೀನ್ ಲೋನೆ(50), ಅವರ ಪತ್ನಿ ಅಝೀಝಿ(50), ಪುತ್ರ ಇರ್ಫಾನ್(22) ಮತ್ತು ಪುತ್ರಿ ಗುಲ್ಶನ್(19) ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಲೋನೆಯ ಇನ್ನೋರ್ವ ಪುತ್ರ ರಿಯಾಝ್ ಅಹ್ಮದ್‌ನನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ಹಿಮಪಾತವಾಗಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರ್ವತಗಳು ಮತ್ತು ತಪ್ಪಲು ಪ್ರದೇಶಗಳಿಂದ ದೂರವಿರುವಂತೆ ಕಣಿವೆಯಲ್ಲಿನ ಎತ್ತರದ ಪ್ರದೇಶದ ನಿವಾಸಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಭಾರೀ ಹಿಮಪಾತದಿಂದಾಗಿ ಶ್ರೀನಗರ- ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದ್ದು, ಶ್ರೀನಗರ ವಿಮಾನ ನಿಲ್ದಾಣಕ್ಕೆ ಎಲ್ಲ ವಿಮಾನಯಾನಗಳನ್ನು ರದ್ದುಗೊಳಿಸಲಾಗಿದೆ.
ಕಳೆದ ವರ್ಷದ ಫೆಬ್ರವರಿಯಲ್ಲಿ ಉತ್ತರ ಗ್ಲೇಸಿಯರ್‌ನಲ್ಲಿ ಭಾರೀ ನೀರ್ಗಲ್ಲು ಕುಸಿದು ಬಿದ್ದ ಪರಿಣಾಮ ಹಿಮದ ರಾಶಿಯಡಿ ಸಿಲುಕಿ 19 ಮದ್ರಾಸ್ ರೆಜಿಮೆಂಟ್‌ನ 10 ಯೋಧರು ಸಾವನ್ನಪ್ಪಿದ್ದರು. ಈ ಪೈಕಿ ಕರ್ನಾಟಕದ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅವರನ್ನು ಆರು ದಿನಗಳ ಬಳಿಕ ಹಿಮದ ರಾಶಿಯಡಿಯಿಂದ ರಕ್ಷಿಸಲಾಗಿತ್ತಾದರೂ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.





