'ಗೋಡೆಗೆ' ಸಹಿ ಹಾಕಿದ ಟ್ರಂಪ್
ಮೆಕ್ಸಿಕೊ ಅಧ್ಯಕ್ಷ ತಿರುಗೇಟು ನೀಡಿದ್ದು ಹೀಗೆ

ಮೆಕ್ಸಿಕೊ ಸಿಟಿ, ಜ.26: ಅಮೆರಿಕದ ದಕ್ಷಿಣ ಗಡಿಯುದ್ದಕ್ಕೂ ಗೋಡೆ ನಿರ್ಮಿಸುವುದಾಗಿ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ ಮೆಕ್ಸಿಕೊದಾದ್ಯಂತ ಸಾರ್ವಜನಿಕರ ಆಕ್ರೋಶ ಕಟ್ಟೆಯೊಡೆದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಉದ್ದೇಶಿಸಿದ್ದ ವಾಷಿಂಗ್ಟನ್ ಭೇಟಿಯನ್ನು ಅಧ್ಯಕ್ಷ ಎನ್ರಿಕ್ ಪೆನಾ ನೀಟೊ ರದ್ದುಗೊಳಿಸುವ ಮೂಲಕ ತಿರುಗೇಟು ನೀಡಿದ್ದಾರೆ.
ಅಧ್ಯಕ್ಷ ಪೆನಾ ನೀಟೊ, ಟ್ರಂಪ್ ಜತೆಗಿನ ಭೇಟಿಯನ್ನು ರದ್ದು ಮಾಡಬೇಕು ಎಂಬ ರಾಜಕೀಯ ಒತ್ತಡ ಮೆಕ್ಸಿಕೊ ದೇಶಾದ್ಯಂತ ವ್ಯಕ್ತವಾಗುತ್ತಿದೆ.
ಇಂದಿನ ಆಕ್ರೋಶ ಹಾಗೂ ನಮ್ಮ ಮಾರ್ಗ ಅಥವಾ ಹೆದ್ದಾರಿ ನೀತಿ ಅನ್ವಯ, ಮೆಕ್ಸಿಕೊ ಜಾಗರೂಕವಾಗಿ ಅಧ್ಯಕ್ಷರ ಮುಂದಿನ ವಾರದ ಭೇಟಿಯನ್ನು ಮರು ಪರಿಶೀಲಿಸುತ್ತಿದೆ" ಎಂದು ಅಮೆರಿಕದಲ್ಲಿ ಮೆಕ್ಸಿಕನ್ ರಾಯಭಾರಿಯಾಗಿದ್ದ ಅರ್ಟುರೊ ಸರುಖಾನ್ ಹೇಳಿದ್ದಾರೆ.
ಟ್ವಿಟ್ಟರ್‌ನಲ್ಲೂ ಟ್ರಂಪ್ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಇದು ಟ್ರಂಪ್ ಮೆಕ್ಸಿಕೊ ವಿರುದ್ಧ ಎಸಗಿರುವ ಅಪರಾಧ, ದೇಶದ ಮುಖದ ಮೇಲೆ ಹೊಡೆದಂತೆ ಹಾಗೂ ಸುಳ್ಳಿನ ಸ್ಮಾರಕವಾಗಿದೆ ಎಂದು ಬಣ್ಣಿಸಲಾಗಿದೆ.
ಟ್ರಂಪ್ ಅವರ ಹೊಸ ಆದೇಶ, ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಹದಗೆಟ್ಟಿದ್ದ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಡಲು ಕಾರಣವಾಗಲಿದೆ. ಗಡಿಯಲ್ಲಿ ಗೋಡೆ ನಿರ್ಮಾಣ, ಲಕ್ಷಾಂತರ ಮೆಕ್ಸಿಕನ್ನರ ಗಡೀಪಾರು ಹಾಗೂ ಉತ್ತರ ಅಮೆರಿಕನ್ ಮುಕ್ತ ವ್ಯಾಪಾರ ಒಪ್ಪಂದ ರದ್ದುಪಡಿಸುವ ಬಗೆಗಿನ ಘೋಷಣೆಗಳನ್ನು ಮೆಕ್ಸಿಕೊ ಗಂಭೀರವಾಗಿ ಪರಿಗಣಿಸಿದೆ. ಬುಧವಾರ ಮೆಕ್ಸಿಕೊ ವಿದೇಶಾಂಗ ಸಚಿವ ಲೂಯಿಸ್ ವಿಡೆಗರೆ ತಮ್ಮ ಮೊಟ್ಟಮೊದಲ ಅಮೆರಿಕ ಭೇಟಿಯಲ್ಲಿ ಉಭಯ ದೇಶಗಳ ನಡುವಿನ ಪ್ರಾಥಮಿಕ ಮಾತುಕತೆಗಳನ್ನು ಆರಂಭಿಸಿದ್ದು, ಇದಕ್ಕೆ ಕೂಡಾ ಈ ಬೆಳವಣಿಗೆ ಅಡ್ಡಗಾಲಾಗಲಿದೆ.







