ನಿರ್ಭಯ ಫಂಡ್ ನ ಸಾವಿರ ಕೋಟಿ ರೂಪಾಯಿಯಲ್ಲಿ ಈವರೆಗೆ ಖರ್ಚಾಗಿದ್ದು ಎಷ್ಟು ಗೊತ್ತೇ ?

ಹೊಸದಿಲ್ಲಿ, ಜ.26: ಮಹಿಳೆಯರ ಸುರಕ್ಷತೆ ಹಾಗೂ ಭದ್ರತೆಗಾಗಿ 2013ರ ಬಳಿಕ ಪ್ರತಿ ಬಜೆಟ್‌ನಲ್ಲಿ 1,000 ಕೋ. ರೂಪಾಯಿಗಳ ನಿರ್ಭಯ ನಿಧಿ ತೆಗೆದಿರಸಲಾಗುತ್ತದೆ. ಆದರೆ ಇದುವರೆಗೆ ಖರ್ಚಾಗಿರುವ ಹಣ ಎಷ್ಟೆಂಬ ಅಂಕಿ ಅಂಶ ತಿಳಿದರೆ ನೀವು ದಂಗಾಗುತ್ತೀರಿ. ಏಕೆ ಗೊತ್ತೇ? ಈ ನಿಧಿಯಿಂದ ಒಂದು ಪೈಸೆಯೂ ಖರ್ಚಾಗಿಲ್ಲ!
ದಿಲ್ಲಿಯಲ್ಲಿ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆಗೆ ಒಳಗಾಗಿದ್ದ ನಿರ್ಭಯಾ ಸ್ಮರಣಾರ್ಥವಾಗಿ ಯುಪಿಎ ಸರ್ಕಾರ ಈ ನಿಧಿಯನ್ನು 2013ರಲ್ಲಿ ಆರಂಭಿಸಿತ್ತು. ಮಹಿಳೆಯರ ಸುರಕ್ಷತೆಗೆ ಈ ನಿಧಿ ಬಳಸಲು ಉದ್ದೇಶಿಸಲಾಗಿತ್ತು.
ಯುಪಿಎ ಪರಂಪರೆ ಮುಂದುವರಿಸಿದ ಎನ್‌ಡಿಎ ಕಳೆದ ಎರಡು ಬಜೆಟ್‌ಗಳಲ್ಲಿ ಕೂಡಾ 1000 ಕೋಟಿ ರೂಪಾಯಿ ತೆಗೆದಿರಿಸಿದರೂ, ಅದರಲ್ಲಿ ಒಂದು ರೂಪಾಯಿಯನ್ನೂ ವೆಚ್ಚ ಮಾಡಿಲ್ಲ. ಯಾವ ನಿರ್ದಿಷ್ಟ ಯೋಜನೆಯೂ ಇಲ್ಲದಿರುವುದು ಇದಕ್ಕೆ ಕಾರಣ. ಮಹಿಳಾ ಸುರಕ್ಷತೆಗೆ ಯೋಜನೆ ಕೈಗೊಳ್ಳುವ ಸ್ವಯಂಸೇವಾ ಸಂಸ್ಥೆಗಳಿಗೆ ನೆರವಾಗುವುದು ಇದರ ವ್ಯಾಪ್ತಿಯಲ್ಲಿ ಸೇರಿದೆ. ಆದರೆ ಹಣವನ್ನು ವಿನಿಯೋಗಿಸುವ ಯಾವ ಯೋಜನೆಯನ್ನೂ ಇದುವರೆಗೆ ಪ್ರಕಟಿಸಿಲ್ಲ.
ಸಂಸತ್ತಿನಲ್ಲಿ ಕಳೆದ ಡಿಸೆಂಬರ್‌ನಲ್ಲಿ ಮಂಡಿಸಿದ ಕೇಂದ್ರ ಹಣಕಾಸು ಲೆಕ್ಕ 2016-17ರ ಅನ್ವಯ, ಸರ್ಕಾರವು ಇದಕ್ಕೆ ಎರಡು ಯೋಜನೆಗಳನ್ನು ರೂಪಿಸಿತ್ತು. ಅವುಗಳೆಂದರೆ 653 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆಗೆ ಕ್ರಮ ಕೈಗೊಳ್ಳುವ ಸಾರಿಗೆ ಸಚಿವಾಲಯದ ಯೋಜನೆ ಒಂದು ಹಾಗೂ 79.6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಭಯಾ ನಿಧಿ ಬಳಸುವ ಗೃಹ ಸಚಿವಾಲಯದ ಯೋಜನೆ ಇನ್ನೊಂದು. ಆದರೆ ಈ ಯಾವ ಯೋಜನೆಯೂ ಚಾಲನೆ ಪಡೆಯದ ಕಾರಣ ಈ ನಿಧಿ ಖರ್ಚಾಗದೇ ಉಳಿದಿದೆ.
2015-16ರಲ್ಲಿ ಮಂಜೂರಾಗಿದ್ದ 461 ಕೋಟಿ ರೂಪಾಯಿ ವೆಚ್ಚದಲ್ಲಿ ಮಹಿಳಾ ಜಾಡಮಾಲಿಗಳಿಗೆ ಪುನರ್ವಸತಿ ಒದಗಿಸುವ ಯೋಜನೆ ಕೂಡಾ ಜಾರಿಯಾಗಲಿಲ್ಲ. ಮಹಿಳೆಯರು ಮತ್ತು ಮಕ್ಕಳ ಅನುಕೂಲಕ್ಕಾಗಿ ನಕ್ಸಲ್‌ಪೀಡಿತ ವಲಯಗಳಲ್ಲಿ ಸೂಕ್ತ ರಸ್ತೆ ನಿರ್ಮಾಣ ಮಾಡುವ 920 ಕೋಟಿ ರೂ. ಯೋಜನೆಗೂ ಇದೇ ಗತಿಯಾಗಿತ್ತು.







