ತವರಿಗೆ ಮರಳುವ ದಾರಿ ನೋಡುತ್ತಿದ್ದಾರೆ ಟ್ರಂಪ್ ಅಮೆರಿಕದ ಭಾರತೀಯ ಟೆಕ್ಕಿಗಳು !

ಹೊಸದಿಲ್ಲಿ, ಜ.26: ಅಮೆರಿಕದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿ ಕೆಲಸ ಮಾಡುವುದೆಂದರೆ ಒಂದೊಮ್ಮೆ ಭಾರತೀಯ ಟೆಕ್ಕಿಗಳಿಗೆ ಹೆಮ್ಮೆಯ ವಿಷಯವಾಗಿತ್ತು. ಆದರೆ ಇದೀಗ ಡೊನಾಲ್ಡ್ ಟ್ರಂಪ್ ಅಮೆರಿಕದ 45ನೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಅವರ ಕೆಲವೊಂದು ‘ಅಮೆರಿಕ ಫಸ್ಟ್’ ನೀತಿಗಳು ಅಲ್ಲಿನ ಭಾರತೀಯ ಮೂಲದ ಟೆಕ್ಕಿಗಳನ್ನು ಕಂಗೆಡಿಸಿವೆ.
ಅಭದ್ರತೆ ಅವರನ್ನು ಕಾಡಲಾರಂಭಿಸಿದ್ದು ಅವರು ಅಮೆರಿಕದಲ್ಲಿನ ಈಗಿನ ತಮ್ಮ ಹುದ್ದೆಗಳಲ್ಲಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿದ್ದಾರೆ. ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಟ್ರಂಪ್ ಆಡಳಿತವು ತನ್ನ ಎಚ್-1ಬಿ ವೀಸಾ ಕಾರ್ಯಕ್ರಮವನ್ನು ಇನ್ನಷ್ಟು ಕಠಿಣಗೊಳಿಸಲು ಯತ್ನಿಸುತ್ತಿರುವುದು ಹಲವರನ್ನು ಚಿಂತಾಕ್ರಾಂತವಾಗಿಸಿದೆ. ಒಂದು ಅಂದಾಜಿನ ಪ್ರಕಾರ ಅಮೆರಿಕದಲ್ಲಿ ಎಚ್-1ಬಿ ವೀಸಾಗಳನ್ನು ಪಡೆದು ಕನಿಷ್ಠ 3 ಲಕ್ಷದಿಂದ 3.5 ಲಕ್ಷ ಭಾರತೀಯ ಇಂಜಿನಿಯರುಗಳಿದ್ದಾರೆ. ಭಾರತೀಯ ಕಂಪೆನಿಗಳಾದ ಇನ್ಫೋಸಿಸ್, ಟಿಸಿಎಸ್, ವಿಪ್ರೋ ಹಾಗೂ ಅಮೆರಿಕದ ಬಹುರಾಷ್ಟ್ರೀಯ ಕಂಪೆನಿಗಳಾದ ಎಕ್ಸೆಂಚೂರ್ ಹಾಗೂ ಐಬಿಎಂ ಹಲವು ಸಮಯದಿಂದ ಈ ಮಾದರಿಯ ಹೊರಗುತ್ತಿಗೆಯನ್ನೇ ಅವಲಂಬಿಸಿವೆ.
ಟ್ರಂಪ್ ಆಡಳಿತವು ಯಾವ ವಿಧದಲ್ಲಿ ವೀಸಾ ನಿಯಮಗಳಿಗೆ ತಿದ್ದುಪಡಿ ತರುವುದೆಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಟೆಕ್ಕಿಗಳ ಪತ್ನಿಯರಲ್ಲೂ ಆತಂಕ :
ಒಬಾಮ ಆಡಳಿತವು ತನ್ನ 2014ರ ನಿರ್ಧಾರವೊಂದರಲ್ಲಿ ಎಚ್1-ಬಿ ವೀಸಾ ಹೊಂದಿದ ಪುರುಷರ ಪತ್ನಿಯರೂ ವರ್ಕ್ ಪರ್ಮಿಟ್ ಗೆ ಅರ್ಜಿ ಸಲ್ಲಿಸಲು ಅನುಮತಿಸಿತ್ತು. ಆದರೆ ಈಗ ಈ ವಿಚಾರದಲ್ಲೂ ಗೊಂದಲ ಮುಂದುವರಿದಿದೆ. ಪ್ರಸಕ್ತ ಸಾಮಾನ್ಯ ವಿಭಾಗದಲ್ಲಿ 65,000 ಎಚ್1-ಬಿ ವೀಸಾಗಳನ್ನುನೀಡಲಾಗುತ್ತಿದ್ದರೆ, ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಿಂದ ಸ್ನಾತ್ತಕೋತ್ತರ ಪದವಿ ಹೊಂದಿದ 20,000 ಮಂದಿಗೆ ಕೂಡ ಅರ್ಜಿ ಸಲ್ಲಿಸಲು ಅನುಮತಿಯಿದೆ. ವರ್ಷವೊಂದರಲ್ಲಿ ಹೊಸ ವೀಸಾ, ನವೀಕರಣ ಹಾಗೂ ಅವಧಿ ವಿಸ್ತರಣೆ ಸೇರಿ ಸುಮಾರು 2 ಲಕ್ಷ ಎಚ್1-ಬಿ ವೀಸಾಗಳನ್ನು ನೀಡಲಾಗುತ್ತಿದೆ.
ವೀಸಾ ನವೀಕರಣ ಸಮಸ್ಯೆ :
ಸದ್ಯವೇ ವೀಸಾ ನವೀಕರಿಸಬೇಕಾಗಿರುವ ಸಾಫ್ಟ್ ವೇರ್ ಇಂಜಿನಿಯರುಗಳೂ ಚಿಂತಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಕಠಿಣ ಕ್ರಮಗಳು ಅಗತ್ಯವೆಂದೂ ಹೇಳುವವರು ಹಲವರಿದ್ದಾರೆ. ಹಲವಾರು ಕಂಪೆನಿಗಳು ಅತ್ಯಂತ ಕೌಶಲ್ಯಯುತ ಉದ್ಯೋಗಿಗಳಿಗೆ ಮಾತ್ರ ನೀಡಲಾಗುವ ವೀಸಾ ಅವಧಿ ವಿಸ್ತರಣೆಯ ಸೌಲಭ್ಯವನ್ನು ಅನಗತ್ಯ ದುರುಪಯೋಗ ಪಡಿಸಿದ ಸಂದರ್ಭಗಳೂ ಇವೆ ಎಂದು ಸಾಫ್ಟ್ ವೇರ್ ಕ್ಷೇತ್ರದ ಹಲವು ಪ್ರಮುಖರು ಒಪ್ಪಿಕೊಳ್ಳುತ್ತಾರೆ.







