ಸೇನೆಯ ವಿರುದ್ಧವೇ ಗೂಢಚಾರಿಕೆ
ಉತ್ತರ ಪ್ರದೇಶದಲ್ಲಿ 11 ಮಂದಿಯ ಬಂಧನ

► ಪ್ರತಿಷ್ಠಿತ ಕೋಚಿಂಗ್ ಸೆಂಟರ್ ಅಧ್ಯಾಪಕ ಗುಲ್ಷನ್ ಸೇನ್ ಸೂತ್ರಧಾರಿ
► ರಾಹುಲ್ ರಸ್ತೋಗಿ, ಶಿವೇಂದ್ರ ಮಿಶ್ರಾ ಸಹಿತ 10 ಸಹಚರರೂ ಬಲೆಗೆ
► ದೇಶದ ವಿರುದ್ಧ ಯುದ್ಧ ಸಾರಿದ ಗಂಭೀರ ಆರೋಪ
► ಪಾಕ್, ನೇಪಾಳ, ಬಾಂಗ್ಲಾಕ್ಕೆ ಭಾರತದ ಮಿಲಿಟರಿ ಮಾಹಿತಿ ಸೋರಿಕೆ
ಲಕ್ನೌ,ಜ.26 : ಸೇನೆಯ ವಿರುದ್ಧವೇ ಗೂಢಚಾರಿಕೆ ನಡೆಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಉಗ್ರ ನಿಗ್ರಹ ಪಡೆ (ಎ ಟಿ ಎಸ್) ಮಂಗಳವಾರ ರಾತ್ರಿ ರಾಜ್ಯದವಿವಿಧ ಪ್ರದೇಶಗಳು ಹಾಗೂ ರಾಜಧಾನಿ ದೆಹಲಿ ಪ್ರದೇಶದಿಂದ 11 ಮಂದಿಯನ್ನು ಬಂಧಿಸಿದೆ. ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ‘‘ಇಂಟರ್ ಕನೆಕ್ಟ್ ಬೈಪಾಸ್ ಫ್ರಾಡ್’ ಮುಖಾಂತರ ಪಾಕಿಸ್ತಾನ, ನೇಪಾಳ, ಸಂಯುಕ್ತ ಅರಬ್ ಸಂಸ್ಥಾನ ಮತ್ತು ಬಾಂಗ್ಲಾದೇಶದಿಂದ ಕರೆ ಮಾಡುವವರಿಗೆ ಸಹಾಯ ಮಾಡುತ್ತಿತ್ತು. ವಿಒಐಪಿ ಟ್ರಾಫಿಕ್ ಕಾಲ್ ಗಳನ್ನು ಮೊಬೈಲ್ ಜಾಲಗಳಿಗೆ ರಿಡೈರೆಕ್ಟ್ ಮಾಡುವ ಸಾಮರ್ಥ್ಯವಿರುವಂತಹ ಸಿಮ್ ಬಾಕ್ಸಿಗೆ ಇಂಟರ್ನೆಟ್ ಮೂಲಕ ಮಾಡಲಾಗುತ್ತಿದ್ದ ಕರೆಗಳನ್ನುಕಳುಹಿಸಿ ಅವರ ಗುರುತನ್ನು ಗುಟ್ಟಾಗಿಡಲು ಸಹಾಯ ಮಾಡುತ್ತಿತ್ತೆಂದು ಆರೋಪಿಸಲಾಗಿದೆ.
ಈ ತಂಡದ ಪ್ರಮುಖ ಆರೋಪಿಯನ್ನು ದೆಹಲಿಯ ಮೆಹ್ರೌಲಿ ನಿವಾಸಿ ಗುಲ್ಶನ್ ಸೇನ್ ಎಂದು ಗುರುತಿಸಲಾಗಿದ್ದು, ಮೂವತ್ತರ ಅಸುಪಾಸಿನ ಈತ ಎಫ್‌ಐಐಟಿಜೆಇಇ ಇಲ್ಲಿ ಶಿಕ್ಷಕನಾಗಿದ್ದಾನೆ. ಟೆಲಿಕಾಂ ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆಗಳ ಮೂಲಕ ಈ ತಂಡವು ಸರಕಾರದ ಬೊಕ್ಕಸಕ್ಕೂ ನಷ್ಟವುಂಟು ಮಾಡಿದೆ ಎಂದು ಆರೋಪಿಸಲಾಗಿದೆ.
ಎರಡು ತಿಂಗಳ ಹಿಂದೆ ಜಮ್ಮು ಕಾಶ್ಮೀರದ ಮಿಲಿಟರಿ ಗುಪ್ತಚರ ವಿಭಾಗ ನೀಡಿದ ಮಾಹಿತಿಯಂತೆ ಉಗ್ರ ನಿಗ್ರಹ ಪಡೆ ಈ ಕಾರ್ಯಾಚರಣೆ ಕೈಗೊಂಡಿತ್ತು. ಎರಡು ಡಜನ್ ಇಂಟರ್ನೆಟ್ ಕಾಲ್ ಲಾಗ್ ಗಳನ್ನು ತನಿಖೆ ನಡೆಸುವಂತೆ ಗುಪ್ತಚರ ವಿಭಾಗ ಕೇಳಿಕೊಂಡಿತ್ತೆನ್ನಲಾಗಿದೆ.
‘‘ಜಮ್ಮು ಕಾಶ್ಮೀರದ ಪ್ರಮುಖ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಿಲಿಟರಿ ಅಧಿಕಾರಿಗಳಿಗೆ ಸ್ಥಿರ ದೂರವಾಣಿ ಹಾಗೂ ಮೊಬೈಲ್ ಸಂಖ್ಯೆಗಳಿಂದ ತಾವು ಹಿರಿಯ ಸೇನಾ ಅಧಿಕಾರಿಗಳೆಂದು ಹೇಳಿಕೊಳ್ಳುತ್ತಿದ್ದ ವ್ಯಕ್ತಿಗಳಿಂದ ಕರೆ ಬರುತ್ತಿತ್ತು. ಈ ಅಪರಿಚಿತ ಕರೆ ಮಾಡುವವರು ನಿರ್ದಿಷ್ಟ ಮಾಹಿತಿಯನ್ನು ಕೋರುತ್ತಿದ್ದರು. ಯಾವುದೇ ಸಂಶಯ ಬಾರದೇ ಇದ್ದುದರಿಂದ ಮಿಲಿಟರಿ ಅಧಿಕಾರಿಗಳೂ ಮಾಹಿತಿ ನೀಡುತ್ತಿದ್ದರು,’’ ಎಂದು ಉಗ್ರ ನಿಗ್ರಹ ಪಡೆಯ ಐಜಿ ಆಸಿಂ ಅರುಣ್ ಹೇಳಿದ್ದಾರೆ.
ಆದರೆ ಜಮ್ಮು ಕಾಶ್ಮೀರದ ಗುಪ್ತಚರ ವಿಭಾಗದ ಅಧಿಕಾರಿಗಳು ಸಂಶಯಗೊಂಡು ಮಿಲಿಟರಿ ಅಧಿಕಾರಿಗಳಿಗೆ ಕರೆ ಬಂದ ಸಂಖ್ಯೆಗಳಿಗೆ ಮತ್ತೆ ಕರೆ ಮಾಡಿದರೂ ಸಂಪರ್ಕ ಅಸಾಧ್ಯವಾಗಿತ್ತು. ಇದರ ನಂತರವೇ ಸೇನೆ ಈ ವಿಚಾರದ ತನಿಖೆ ನಡೆಸುವಂತೆ ಎ ಟಿ ಎಸ್ ಗೆ ಆದೇಶಿಸಿತ್ತು. ಟೆಲಿಕಾಂ ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ ಮಿಲಿಟರಿ ಅಧಿಕಾರಿಗಳಿಗೆ ಅಕ್ರಮ ವಿಒಐಪಿ ಟ್ರಾಫಿಕ್ ಮುಖಾಂತರ ಕರೆ ಬರುತ್ತಿತ್ತೆಂದು ತಿಳಿದು ಬಂತ್ತು. ವಿವಿಧ ಸೇನಾ ವಿಭಾಗಗಳ ನಿಜ ದೂರವಾಣಿ ಸಂಖ್ಯೆಗಳನ್ನು ಅನುಕರಿಸಿದ್ದರಿಂದ ಗೂಢಚಾರಿಕೆ ನಡೆದಿರಬಹುದೆಂಬ ಶಂಕೆಯಿಂದ ಎ ಟಿ ಎಸ್ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿತ್ತು.ಟೆಲಿಕಾಂ ಜಾರಿ ಸಂಪನ್ಮೂಲ ಮತ್ತು ಮೇಲ್ವಿಚಾರಣಾ ಘಟಕವನ್ನು ಸಂಪರ್ಕಿಸಿ ತನಿಖೆ ಮುಂದುವರಿಸಿದಾಗ ಉತ್ತರ ಪ್ರದೇಶದ ಮೂರು ಕಡೆಗಳಿಂದ 16 ಸಿಮ್ ಬಾಕ್ಸ್ ಗಳ ಮುಖಾಂತರವಿದೇಶಗಳಿಂದ ಬಂದ ಇಂಟರ್ನೆಟ್ ಕರೆಗಳನ್ನು ಸ್ಥಳೀಯ ಕರೆಗಳೆಂದು ಬಿಂಬಿಸಲಾಗಿತ್ತು ಎಂದು ತಿಳಿದು ಬಂದಿತ್ತು. ಪ್ರಮುಖ ಆರೋಪಿ ಗುಲ್ಶನ್ ಸೇನ್ಮೂರು ಪರ್ಯಾಯ ಅಕ್ರಮ ದೂರವಾಣಿ ವಿನಿಮಯ ಕೇಂದ್ರಗಳಿಗೆ ಆಗತ್ಯ ತಾಂತ್ರಿಕ ಸಹಾಯ ಒದಗಿಸುತ್ತಿದ್ದ.
ಮಂಗಳವಾರ ರಾತ್ರಿ ಎ ಟಿ ಎಸ್ ಅಧಿಕಾರಿಗಳು ಜೆ ಅಲಿಗಂಜ್, ಲಕ್ನೌ, ಹರ್ದೋಯಿ ಹಾಗೂ ಸೀತಾಪುರದಲ್ಲಿ ದಾಳಿ ನಡೆಸಿದ್ದು ಬಂಧಿತಇತರರೆಂದರೆ ರಾಹುಲ್ ರಸ್ತೋಗಿ, ಶಿವೇಂದ್ರ ಮಿಶ್ರಾ, ಹರ್ಷಿತ್ ಗುಪ್ತಾ, ವಿಶಾಲ್ ಕಕ್ಕಡ್, ರಾಹುಲ್ ಸಿಂಗ್, ವಿನೀತ್ ದೀಕ್ಷಿತ್, ರಿಷಿ ಹೋರಾ, ಶ್ಯಾಮ್ ಬಾಬು, ಉತ್ತಮ್ ಶುಕ್ಲಾ ಹಾಗೂ ವಿಕಾಸ್ ವರ್ಮ. ವಿಚಾರಣೆಗಾಗಿ ಪ್ರಮುಖ ಆರೋಪಿ ಗುಲ್ಶನ್ ನನ್ನು ಲಕ್ನೌಗೆ ತರಲಾಗಿದೆ.
ಐದು ತನಿಖಾ ತಂಡಗಳು ಈ ಪ್ರಕರಣವನ್ನು ಭೇದಿಸಿದ್ದು10 ಮೊಬೈಲ್ ಫೋನುಗಳು, 16 ಸಿಮ್ ಬಾಕ್ಸ್, ವಿವಿಧ ಕಂಪೆನಿಗಳ 140 ಪ್ರೀಪೇಯ್ಡ್ ಸಿಮ್ ಕಾರ್ಡುಗಳು, ಐದು ಲ್ಯಾಪ್ ಟಾಪ್ ಗಳುಹಾಗೂ 28 ಡಾಟಾ ಕಾರ್ಡುಗಳನ್ನೂ ವಶಪಡಿಸಿಕೊಳ್ಳಲಾಗಿದೆ.







