ಪಕ್ಷದ ಸಂಸದನನ್ನೇ ಕಟ್ಟಿ ಹಾಕಿ, ಒತ್ತೆ ಇಟ್ಟ ಬಿಜೆಪಿ ಕಾರ್ಯಕರ್ತರು!

ಫೈಝಾಬಾದ್, ಜ.26: ಅಯೋಧ್ಯೆಯ ಅಸೆಂಬ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಹೊರಗಿನವರೊಬ್ಬರಿಗೆ ಟಿಕೆಟ್ ನೀಡಿರುವುದಕ್ಕೆ ಆಕ್ರೋಶಗೊಂಡಿರುವ ಬಿಜೆಪಿ ಕಾರ್ಯಕರ್ತರ ಗುಂಪೊಂದು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸ್ಥಳೀಯ ಸಂಸದ ಲಲ್ಲು ಸಿಂಗ್ ಹಾಗೂ ಜಿಲ್ಲಾಧ್ಯಕ್ಷ ಅವಧೇಶ್ ಪಾಂಡೆಯನ್ನು ಹಗ್ಗಗಳಿಂದ ಕಟ್ಟಿ ಹಾಕಿ ದಿಗ್ಭಂಧನ ವಿಧಿಸಿದ ಘಟನೆ ನಡೆದಿದೆ.
ಇತ್ತೀಚೆಗೆ ಬಿಎಸ್ಪಿಯಿಂದ ಬಿಜೆಪಿಗೆ ಸೇರಿದ್ದ ವೇದ್ ಗುಪ್ತಾರಿಗೆ ಅಯೋಧ್ಯೆಯಿಂದ ಸ್ಪರ್ಧಿಸಲು ಟಿಕೆಟ್ ನೀಡಿದ್ದೇ ಪಕ್ಷ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಕಾರ್ಯಕರ್ತರ ಬೇಡಿಕೆಯನ್ನು ಪಕ್ಷದ ರಾಜ್ಯ ನಾಯಕತ್ವದ ಮುಂದಿಡುವುದಾಗಿ ಲಲ್ಲು ಸಿಂಗ್ ಹಾಗೂ ಅವಧೇಶ್ ಪಾಂಡೆ ಆಶ್ವಾಸನೆ ನೀಡಿದ ಬಳಿಕ ಎರಡು ಗಂಟೆಗಳ ನಂತರ ಅವರನ್ನು ಬಿಡುಗಡೆಗೊಳಿಸಲಾಯಿತು.
ಅಯೋಧ್ಯೆಯಿಂದ ಸ್ಪರ್ಧಿಸಲು ಟಿಕೆಟ್ ಪಡೆದಿರುವ ವೇದ್ ಗುಪ್ತಾ ಆರಂಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದರೆ, 80ರ ದಶಕದಲ್ಲಿ ಬಿಜೆಪಿ ಸೇರಿದ್ದರಲ್ಲದೆ, ಬಾಬ್ರಿ ಮಸೀದಿ ಧ್ವಂಸ ಕಾರ್ಯಾಚರಣೆಯಲ್ಲಿ ಸಕ್ರಿಯರಾಗಿದ್ದರೆನ್ನಲಾಗಿದೆ.
2002ರಲ್ಲಿ ಸಮಾಜವಾದಿ ಪಕ್ಷ ಸೇರಿದ್ದ ಅವರು 2012ರಲ್ಲಿ ಬಿಎಸ್ಪಿಗೆ ಸೇರಿ ಇದೀಗ ಮತ್ತೆ ಬಿಜೆಪಿ ತೆಕ್ಕೆಗೆ ಬಂದು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.





