ಗುರೇಜ್:ಹಿಮಬಂಡೆಗಳಿಗೆ 10 ಯೋಧರು ಬಲಿ

ಶ್ರೀನಗರ,ಜ.26: ಕಾಶ್ಮೀರದ ಗುರೇಜ್ ವಿಭಾಗದಲ್ಲಿ ಸಂಭವಿಸಿದ ಹಿಮ ಬಂಡೆಗಳ ಕುಸಿತದಿಂದಾಗಿ 10 ಯೋಧರು ಸಾವನ್ನಪ್ಪಿದ್ದಾರೆ.
ಬಂಡಿಪೋರಾ ಜಿಲ್ಲೆಯ ಗುರೇಜ್ ವಿಭಾಗದಲ್ಲಿ ನಿಯಂತ್ರಣ ರೇಖೆಯ ಬಳಿ ನಿನ್ನೆ ಸಂಜೆ ಸೇನಾಶಿಬಿರದ ಮೇಲೆ ಭಾರೀ ಗಾತ್ರದ ನೀರ್ಗಲ್ಲು ಅಪ್ಪಳಿಸಿದ ಪರಿಣಾಮ ಹಲವಾರು ಯೋಧರು ಹಿಮರಾಶಿಯಡಿ ಸಿಲುಕಿದ್ದರು. ರಕ್ಷಣಾ ಕಾರ್ಯಾಚರಣೆಯಲ್ಲಿ ಓರ್ವ ಜ್ಯೂನಿಯರ್ ಕಮಿಷನ್ಡ್ ಅಧಿಕಾರಿ ಸೇರಿದಂತೆ ಏಳು ಜನರನ್ನು ರಕ್ಷಿಸಲಾಗಿದೆ. ಇಂದು ಬೆಳಿಗ್ಗೆ ಮೂವರು ಯೋಧರ ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ ಎಂದು ಸೇನಾಧಿಕಾರಿಯೋರ್ವರು ಗುರುವಾರ ತಿಳಿಸಿದರು.
ಪ್ರತ್ಯೇಕ ಘಟನೆಯಲ್ಲಿ ಕಳೆದ ಸಂಜೆ ಗುರೇಜ್ ವಿಭಾಗದಲ್ಲಿ ಸೇನಾನೆಲೆಯತ್ತ ಸಾಗುತ್ತಿದ್ದ ಗಸ್ತು ತಂಡದ ಮೇಲೆ ನೀರ್ಗಲ್ಲು ಕುಸಿದು ಬಿದ್ದಿತ್ತು. ರಕ್ಷಣಾ ತಂಡಗಳು ಈ ವರೆಗೆ ಏಳು ಯೋಧರ ಶವಗಳನ್ನು ಅವಶೇಷಗಳಡಿಯಿಂದ ಹೊರಕ್ಕೆ ತೆಗೆದಿದೆ ಎಂದರು.
ಬುಧವಾರ ಬೆಳಿಗ್ಗೆ ಗಂದೇರ್‌ಬಾಲ್ ಜಿಲ್ಲೆಯ ಸೋನಾಮಾರ್ಗ್‌ದಲ್ಲಿ ಹಿಮದ ರಾಶಿ ಕುಸಿದುಬಿದ್ದ ಪರಿಣಾಮ ಸೇನಾಧಿಕಾರಿಯೋರ್ವರು ಮೃತಪಟ್ಟಿದ್ದರೆ,ಗುರೇಜ್ ವಿಭಾಗದಲ್ಲಿ ಭಾರಿ ಗಾತ್ರದ ಹಿಮಬಂಡೆ ಮನೆಯೊಂದರ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು.







