ಸ್ವಾಭಿಮಾನ, ಧನಾತ್ಮಕ ಚಿಂತನೆಗಳಿಂದ ದೇಶ ಶ್ರೀಮಂತ: ಬ್ರಿಗೇಡಿಯರ್ ಐ.ಎನ್. ರೈ
30 ಸಾವಿರ ಸಭಿಕರಿಂದ ವಂದೇ ಮಾತರಂ ಗಾಯನ
.gif)
# 250ಕ್ಕೂ ಅಧಿಕ ಮಾಜಿ ಸೈನಿಕರು ಕುಟುಂಬ ಸಮೇತ ಭಾಗಿ
ಮೂಡುಬಿದಿರೆ (ವನಜಾಕ್ಷಿ ಶ್ರೀಪತಿ ಭಟ್ ವೇದಿಕೆ), ಜ.26: ಭಾರತ ಬಡ ರಾಷ್ಟ್ರವಲ್ಲ. ನಮ್ಮಲ್ಲಿ ಸ್ವಾಭಿಮಾನ ಹಾಗೂ ಧನಾತ್ಮಕ ಚಿಂತನೆಗಳ ಕೊರತೆಯೇ ಅಭಿವೃದ್ಧ್ದಿಯ ಹಿನ್ನೆಡೆಗೆ ಕಾರಣ. ದೇಶದ ಉಜ್ವಲ ಭವಿಷ್ಯ ಯುವಶಕ್ತಿಯ ಕೈಯಲ್ಲಿದೆ. ಯುವ ಸಮುದಾಯ ಎಚ್ಚೆತ್ತುಕೊಂಡಲ್ಲಿ ದೇಶ ಉನ್ನತಿಯತ್ತ ಸಾಗಲು ಸಾಧ್ಯ ಎಂದು ಭಾರತೀಯ ಸೇನೆಯ ಬ್ರಿಗೇಡಿಯರ್ ಐ.ಎನ್. ರೈ ಹೇಳಿದರು.
ಅವರು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪುತ್ತಿಗೆಯಲ್ಲಿರುವ ವಿಶಾಲ ಬಯಲು ರಂಗಮಂದಿರದಲ್ಲಿ ನಡೆದ 68ನೆ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ದೇಶದ ಕಟ್ಟಾಳುಗಳಾಗಬೇಕಾದ ಅನಿವಾರ್ಯತೆ ಇದೆ. ಗಣರಾಜ್ಯೋತ್ಸವ ಸಂದರ್ಭ ಇಷ್ಟೊಂದು ಸಂಖ್ಯೆಯಲ್ಲಿ ಶಿಸ್ತುಬದ್ಧವಾಗಿ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಅದ್ಭುತವಾಗಿ ಆಚರಿಸುವುದು ವಿಶೇಷ ಎಂದರು. ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ಬಡತನ, ಅನಕ್ಷರತೆಯ ಸಮಸ್ಯೆಗಳು ದೇಶವನ್ನು 70 ವರ್ಷಗಳ ಹಿಂದೆ ಬಹಳವಾಗಿ ಕಾಡಿತ್ತು. ಆದರೆ ಈಗ ಚಿತ್ರಣ ಸಂಪೂರ್ಣ ಬದಲಾಗಿದೆ. ದೇಶದಲ್ಲಿ ಶಿಕ್ಷಣದ ಮಹತ್ವ ಎಲ್ಲರಿಗೂ ಅರಿವಾಗಿದ್ದು, ಹಿಂದೆ ನಮ್ಮನ್ನು ಕಾಡುತ್ತಿದ್ದ ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಲ್ಲುವ ತಾಕತ್ತು ಹೊಂದಿದ್ದೇವೆ. ವಿಶ್ವದಲ್ಲಿ ಈಗ ಭಾರತ ತನ್ನ ವರ್ಚಸ್ಸನ್ನು ಹೆಚ್ಚು ಎತ್ತರಕ್ಕೆ ಕೊಂಡೊಯ್ದಿದೆ. ಇದು ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ಧನಾತ್ಮಕ ಸ್ಫೂರ್ತಿಯನ್ನು ತುಂಬುವಲ್ಲಿ ಸಹಕಾರಿಯಾಗಿದೆ ಎಂದರು.
ದೇಶಕ್ಕಾಗಿ ತಮ್ಮದೇ ಆದ ಕ್ಷೇತ್ರದಲ್ಲಿ ಕೆಲಸ ಮಾಡುವ ಅದಮ್ಯ ಉತ್ಸಾಹವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ರಾಷ್ಟ್ರರಕ್ಷಣೆ, ದೇಶದ ಒಳಿತು ಎರಡೂ ನಮ್ಮದೇ ಜವಾಬ್ದಾರಿಗಳಾಗಿವೆ. ದೇಶ ನಮ್ಮದು ಎಂಬ ಭಾವನೆ ಬಂದರೆ ಸುಂದರ ದೇಶ ನಿರ್ಮಾಣ ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಶಾಸಕ ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉಪಸ್ಥಿತರಿದ್ದರು. ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಹಾಗೂ ವಿವಿಧ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಶಿಕ್ಷಕರು, ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಶೇಷತೆಗಳು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಆಯೋಜನೆಗೊಂಡ ಗಣರಾಜ್ಯೋತ್ಸವ ಕಾರ್ಯಕ್ರಮ ಹಲವು ವಿಶೇಷತೆಗಳಿಗೆ ಕಾರಣವಾಯಿತು. 30 ಸಾವಿರ ಜನರು ಒಂದೇ ಬಯಲಿನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಒಂದೇ ಸ್ವರದಲ್ಲಿ ವಂದೇ ಮಾತರಂ ಹಾಡಿಗೆ ದನಿಯಾದರು.
ಭಾರತೀಯ ಸೈನಿಕ ಸೇವೆಯಿಂದ ನಿವೃತ್ತರಾದ 250ಕ್ಕೂ ಹೆಚ್ಚು ಎಕ್ಸ್ ಸರ್ವೀಸ್‌ಮೆನ್ ಹಾಗೂ ಅವರ ಕುಟುಂಬಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿವಿಧ ವಿದ್ಯಾಸಂಸ್ಥೆಗಳ 18 ಎನ್‌ಸಿಸಿ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿಕೊಟ್ಟವು. 4000ಕ್ಕೂ ಅಧಿಕ ವಿದ್ಯಾರ್ಥಿಗಳು ತ್ರಿವರ್ಣ ಟಿ-ಶರ್ಟ್‌ಗಳನ್ನು ಧರಿಸಿ ಗಮನಸೆಳೆದರು. ಇದರ ಜೊತೆಗೆ 100 ತ್ರಿವರ್ಣದ ಕೊಡೆಗಳು ಹಾಗೂ ತ್ರಿವರ್ಣ ಧ್ವಜಗಳು ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿದ್ದವು. ವಿದ್ಯಾರ್ಥಿ ಸಮೂಹದ ನಡುವೆ ತ್ರಿವರ್ಣ ಉಡುಗೆ ತೊಟ್ಟ ವಿದ್ಯಾರ್ಥಿಗಳು ‘ಇಂಡಿಯಾ’ ಬರಹದಲ್ಲಿ ನಿಂತಿದ್ದು ಆಕರ್ಷಕವೆನಿಸಿತ್ತು. ಗಾಯಕ ರಮೇಶ್ಚಂದ್ರ ಹಾಗೂ ತಂಡ ಕಾರ್ಯಕ್ರಮದಲ್ಲಿ ಸಂಗೀತ ನಿರ್ವಹಣೆ ನೀಡಿತು.







