ಫೆಬ್ರವರಿ ಅಂತ್ಯಕ್ಕೆ ಹಣ ಹಿಂಪಡೆತ ನಿರ್ಬಂಧ ರದ್ದು:ಬ್ಯಾಂಕರ್‌ಗಳ ನಿರೀಕ್ಷೆ

ಹೊಸದಿಲ್ಲಿ,ಜ.26: ನಗದು ಕೊರತೆಯಲ್ಲಿ ಸುಧಾರಣೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಬ್ಯಾಂಕುಗಳು ಮತ್ತು ಎಟಿಎಂಗಳಿಂದ ಹಣ ಹಿಂಪಡೆಯುವುದರ ಮೇಲೆ ವಿಧಿಸಲಾಗಿರುವ ವಾರದ ಮಿತಿಯನ್ನು ಫೆಬ್ರವರಿ ಅಂತ್ಯದ ವೇಳೆಗೆ ರದ್ದು ಗೊಳಿಸುವ ಸಾಧ್ಯತೆಯಿದೆ ಎಂದು ಬ್ಯಾಂಕರ್‌ಗಳು ಭರವಸೆ ವ್ಯಕ್ತಪಡಿಸಿದ್ದಾರೆ.
ಆರ್‌ಬಿಐ ಎಟಿಎಂ ಮೂಲಕ ಪಡೆಯುವ ಹಣದ ಮಿತಿಯನ್ನು ಇತ್ತೀಚಿಗೆ 10,000 ರೂ.ಗೆ ಹೆಚ್ಚಿಸಿದೆಯಾದರೂ ವಾರಕ್ಕೆ ಉಳಿತಾಯ ಖಾತೆಗಳಿಂದ 24,000 ರೂ. ಮತ್ತು ಚಾಲ್ತಿ ಖಾತೆಗಳಿಂದ ಒಂದು ಲಕ್ಷ ರೂ.ಗಳನ್ನಷ್ಟೇ ಹಿಂಪಡೆಯುವ ಮಿತಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿರಲಿಲ್ಲ.
ನಗದು ಪರಿಸ್ಥಿತಿಯಲ್ಲಿ ಕ್ರಮೇಣ ಸುಧಾರಣೆಗಳು ಕಂಡುಬರುತ್ತಿರುವುದರಿಂದ ಫೆಬ್ರವರಿ ಅಂತ್ಯದಲ್ಲಿ ಅಥವಾ ಮಾರ್ಚ್ ಪೂರ್ವಾರ್ಧದಲ್ಲಿ ಹಣ ಹಿಂಪಡೆಯುವುದರ ಮೇಲಿನ ಮಿತಿಯನ್ನು ಆರ್‌ಬಿಐ ರದ್ದುಗೊಳಿಸಬಹುದು ಎಂದು ಬ್ಯಾಂಕ್ ಆಫ್ ಮಹಾರಾಷ್ಟ್ರದ ಕಾರ್ಯಕಾರಿ ನಿರ್ದೇಶಕ ಆರ್.ಕೆ.ಗುಪ್ತಾ ತಿಳಿಸಿದರು.
ಫೆಬ್ರವರಿ ಅಂತ್ಯದ ವೇಳೆಗೆ ಶೇ.78-88 ರಷ್ಟು ನಗದು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಬಹುದು. ಮುಂದಿನ ಎರಡು ತಿಂಗಳುಗಳಲ್ಲಿ ಪರಿಸ್ಥಿತಿ ಸಹಜವಾಗಬಹುದು ಎಂದು ಎಸ್‌ಬಿಐನ ಸಂಶೋಧನಾ ವರದಿ ಎಕೊರ್ಯಾಪ್ ಹೇಳಿದೆ.
ಪ್ರಸಕ್ತ ಆರ್ಥಿಕ ವರ್ಷ ಅಂತ್ಯಗೊಳ್ಳುವ ಮೊದಲೇ ಎಲ್ಲ ನಿರ್ಬಂಧಗಳು ರದ್ದಾಗಬಹುದು ಎಂದು ಸರಕಾರಿ ಸ್ವಾಮ್ಯದ ಬ್ಯಾಂಕೊಂದರ ಹಿರಿಯ ಅಧಿಕಾರಿ ತಿಳಿಸಿದರು.







