ಹಕ್ಕು ಕರ್ತವ್ಯಗಳ ಜೊತೆ ಜವಾಬ್ದಾರಿಯ ಅರಿವು ಬಹುಮುಖ್ಯ: ರಘುನಂದನ್ ಮೂರ್ತಿ
ಪುತ್ತೂರಿನಲ್ಲಿ ಗಣರಾಜ್ಯೋತ್ಸವ

ಪುತ್ತೂರು, ಜ.26: ಭಾರತವು ಸಾರ್ವಭೌಮತ್ವದ ಪ್ರಜಾಪ್ರಭುತ್ವ ದೇಶವಾಗಿದ್ದು, ಜನಸಾಮಾನ್ಯರು ತಮ್ಮ ಹಕ್ಕು ಕರ್ತವ್ಯಗಳ ಜೊತೆಗೆ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದು ಪುತ್ತೂರು ಉಪವಿಭಾಗಾಧಿಕಾರಿ ರಘುನಂದನ್ ಮೂರ್ತಿ ಅಭಿಪ್ರಾಯಪಟ್ಟರು.
ಅವರು ಗುರುವಾರ ಪುತ್ತೂರಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ವಂದನೆ ಸ್ವೀಕರಿಸಿ ಸಂದೇಶ ನೀಡಿದರು.
ದೇಶದ ಕಾನೂನು ಹಾಗೂ ನಿಯಮಗಳನ್ನು ಉಲ್ಲಂಘನೆ ಮಾಡುವುದು ಅಗೌರವ ತೋರುವುದು ದೇಶ ವಿರೋಧಿ ಕೃತ್ಯವಾಗಿದೆ. ದೇಶದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಂವಿಧಾನ ವಿರೋಧಿ ಕೃತ್ಯಗಳನ್ನು ನಡೆಸದೆ ಜಾತಿ-ಧರ್ಮ ಮರೆತು ದೇಶ ರಕ್ಷಣೆಯ ಕೆಲಸವನ್ನು ಪ್ರತಿಯೊಬ್ಬ ನಾಗರಿಕರೂ ತಮ್ಮ ಕರ್ತವ್ಯವೆಂದು ಪರಿಗಣಿಸಿ ಮಾಡಬೇಕು ಎಂದರು.
ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ನಮಗೆ ದೊರೆತಿರುವ ಸ್ವಾತಂತ್ರ ದುರುಪಯೋಗವಾಗದಂತೆ ತಡೆಯಲು ಸಂವಿಧಾನವನ್ನು ರಚಿಸಲಾಗಿದೆ. ಯುವ ಜನಾಂಗ ಈ ಸತ್ಯವನ್ನು ಅರಿತು ಜಾಗೃತರಾಗಿ ದೇಶವನ್ನು ಮುನ್ನಡೆಸಬೇಕು ಎಂದರು.
ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭಾಧ್ಯಕ್ಷೆ ಜಯಂತಿ ಬಲ್ನಾಡು, ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಶುಭ ಹಾರೈಸಿದರು.
ಪುತ್ತೂರು ಉಪವಿಭಾಗದ ಪ್ರಭಾರ ಪೊಲೀಸ್ ಉಪಾಧೀಕ್ಷಕ ಭಾಸ್ಕರ ರೈ, ತಾಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್., ಪೌರಾಯುಕ್ತೆ ರೂಪಾ ಶೆಟ್ಟಿ ಉಪಸ್ಥಿತರಿದ್ದರು. ಪುತ್ತೂರಿನ ಪೊಲೀಸ್ ಘಟಕ, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಎನ್‌ಸಿಸಿ ಘಟಕ, ಭಾರತ ಸೇವಾದಳ, ಆರ್ಮಿ, ಏರ್‌ವಿಂಗ್, ನೇವಿ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.







