ಮೂಡುಬಿದಿರೆ: ಕಂಬಳ ಉಳಿಸಿ ಅಭಿಯಾನಕ್ಕೆ ಚಾಲನೆ

ಮೂಡುಬಿದಿರೆ, ಜ.26: ತುಳುನಾಡಿನ ಸಾಂಪ್ರದಾಯಿಕ ಕಂಬಳ ಇಲ್ಲಿನ ದೈವಗಳಾಗಿರುವ ವೀರಪುರುಷರ ಹೆಸರಿನಲ್ಲಿ ನಡೆಯುತ್ತಿದ್ದು, ಇದರಿಂದ ಅವರ ಸ್ಮರಣೆ ಹಾಗೂ ಭಕ್ತಿಯ ಸಂಕೇತವಾಗಿ ಜನರೆಡೆಯಲ್ಲಿ ಸಾಗಿಬಂದಿದೆ. ಈಗ ಕಂಬಳದ ಮೇಲಾಗಿರುವ ನಿಷೇಧವನ್ನು ನಾವೆಲ್ಲಾ ನಾಡಿನ ಜನತೆ ಒಕ್ಕೊರಲಿನಿಂದ ಪ್ರತಿಭಟಿಸುವ ಅನಿವಾರ್ಯತೆ ಇದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದಿವಾಕರ ಶೆಟ್ಟಿ ತೋಡಾರು ಹೇಳಿದರು.
ಮೂಡುಬಿದಿರೆಯ ಬಸ್ಸು ನಿಲ್ದಾಣದಲ್ಲಿ ಆರಂಭಗೊಂಡ ಎರಡು ದಿನಗಳ ‘ಕಂಬಳ ಉಳಿಸಿ’ ಅಭಿಯಾನವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ತುಳುನಾಡಿನ ಎರಡು ಜಿಲ್ಲೆಗಳಲ್ಲಿ ದೈವಾರಾಧನೆಯ ಜೊತೆಗೆ ಕಂಬಳವೂ ಮಹತ್ವದ್ದಾಗಿದೆ. ತಲೆತಲಾಂತರದಿಂದ ನಡೆದು ಬಂದ ಈ ಕ್ರೀಡೆಯನ್ನು ಸರಕಾರವು ಜಾನಪದ ಕ್ರೀಡೆ ಎಂಬುದಾಗಿ ಅಧಿಕೃತವಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಅಶ್ವಿನ್ ಜೆ.ಪಿರೇರ, ಜನವರಿ 28ರಂದು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಲಿರುವ ಪ್ರತಿಭಟನಾ ಕಂಬಳ ಅಥವಾ ವಿಜಯೋತ್ಸವ ಕಾರ್ಯಕ್ರಮದ ಪ್ರಚಾರಾರ್ಥ ಈ ಅಭಿಯಾನ ಆರಂಭಿಸಿದ್ದು, ಆ ಮೂಲಕ ಕಂಬಳ ಉಳಿಸುವ ಹೋರಾಟದ ಬೆಂಬಲಕ್ಕೆ ನಿಂತಿದ್ದೇವೆ ಎಂದರು.
ಈ ಸಂದರ್ಭ ಗ್ರಾ.ಪಂ. ಮಾಜಿ ಸದಸ್ಯರಾದ ಜೆರಾಲ್ಡ್ ಮೆಂಡಿಸ್, ಮೂಡುಬಿದಿರೆ ಬ್ಲಾಕ್ ಯುವ ಜೆಡಿಎಸ್ ಅಧ್ಯಕ್ಷ ಅಶ್ರಫ್ ತೋಡಾರು, ಕಿಶೋರ್ ಶೆಟ್ಟಿ, ಭಾಸ್ಕರ ಆಚಾರ್ಯ, ಲಿಯೋ ನಝರೆತ್ ಮತ್ತಿತರರು ಉಪಸ್ಥಿತರಿದ್ದರು







