ವಿದೇಶಾಂಗ ಕಾರ್ಯದರ್ಶಿಗೆ ಒಂದು ವರ್ಷ ವಿಸ್ತರಣೆ ನೀಡಲು 95 ವರ್ಷ ಹಳೆಯ ನಿಯಮಕ್ಕೆ ತಿದ್ದುಪಡಿ

ಹೊಸದಿಲ್ಲಿ,ಜ.26: ಕೇಂದ್ರ ಸರಕಾರವು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರ ಸೇವಾವಧಿಯನ್ನು ಒಂದು ವರ್ಷ ವಿಸ್ತರಿಸಲು 95 ವರ್ಷ ಹಳೆಯ ನಿಯಮದಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಂಪುಟದ ನೇಮಕಾತಿಗಳ ಸಮಿತಿಯು ಸೋಮವಾರ ಸಭೆ ಸೇರಿ ಜೈಶಂಕರ ಅವರ ಸೇವಾವಧಿಯನ್ನು ಮುಂದಿನ ವರ್ಷದ ಜ.28ರವರೆಗೆ ಒಂದು ವರ್ಷ ವಿಸ್ತರಿಸಿದೆ. ಜೈಶಂಕರ್ ಅವರ ಎರಡು ವರ್ಷಗಳ ಸೇವಾವಧಿ ರವಿವಾರ,ಜ.29ಕ್ಕೆ ಅಂತ್ಯಗೊಳ್ಳಲಿದೆ.
ಜೈಶಂಕರ್ ಅವರ ಸೇವಾವಧಿ ವಿಸ್ತರಣೆಗೆ ಸುಗಮ ಮಾರ್ಗ ಕಲ್ಪಿಸಲು ಸಿಬ್ಬಂದಿ ಸಚಿವಾಲಯವು ಮೂಲಭೂತ ನಿಯಮಾವಳಿಗಳು,1922ರ ನಿಯಮವೊಂದನ್ನು ತಿದ್ದುಪಡಿಗೊಳಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿದವು. ಪ್ರಸಕ್ತ ಸೇವಾ ನಿಯಮಗಳು ವಿದೇಶಾಂಗ,ರಕ್ಷಣಾ ಮತ್ತು ಗೃಹ ಕಾರ್ಯದರ್ಶಿಗಳಿಗೆ ಹಾಗೂ ಸಿಬಿಐ ನಿರ್ದೇಶಕರಿಗೆ ಎರಡು ವರ್ಷಗಳ ಸೇವಾವಧಿಯನ್ನು ನಿಗದಿಗೊಳಿಸಿವೆ.
2015,ಜ.29ರಂದು ಆಗಿನ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಅವರ ಅಧಿಕಾರಾವಧಿಯನ್ನು ದಿಢೀರ್ ಆಗಿ ಮೊಟಕುಗೊಳಿಸಿದ್ದ ಕೇಂದ್ರ ಸರಕಾರವು ಕೆಲವೇ ದಿನಗಳಲ್ಲಿ ನಿವೃತ್ತರಾಗಲಿದ್ದ 1997ರ ತಂಡದ ಐಎಫ್‌ಎಸ್ ಅಧಿಕಾರಿಯಾಗಿರುವ ಜೈಶಂಕರ್‌ರನ್ನು ಅವರ ಹುದ್ದೆಗೆ ನೇಮಕಗೊಳಿಸಿತ್ತು.
ಇದೀಗ ಜೈಶಂಕರ ಅವರ ಸೇವಾವಧಿಯ ವಿಸ್ತರಣೆಯಿಂದಾಗಿ ಇಟಲಿಗೆ ಭಾರತದ ರಾಯಭಾರಿಯಾಗಿರುವ ಅನಿಲ್ ವಾಡಿಯಾ ಮತ್ತು ಕಾರ್ಯದರ್ಶಿ(ಪಶ್ಚಿಮ) ಸುಜಾತಾ ಮೆಹ್ತಾ ಸೇರಿದಂತೆ ಹಲವಾರು ಹಿರಿಯ ರಾಜತಾಂತ್ರಿಕರು ವಿದೇಶಾಂಗ ಕಾರ್ಯದರ್ಶಿ ಹುದ್ದೆಗೇರುವ ಅವಕಾಶ ದೊರೆಯದೆ ನಿವೃತ್ತರಾಗಲಿದ್ದಾರೆ.
ಜೈಶಂಕರ್ ಸ್ಥಾನಕ್ಕೆ ಪ್ರಮುಖ ಸ್ಪರ್ಧಿಗಳಲ್ಲೊಬ್ಬರೆಂದು ಪರಿಗಣಿಸಲಾದ,ಹಾಲಿ ಚೀನಾದಲ್ಲಿ ಭಾರತದ ರಾಯಭಾರಿಯಾಗಿರುವ ವಿಜಯ ಗೋಖಲೆ ಅವರು 2019,ಜನವರಿ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ.







