ಕಂಬಳದ ರಕ್ಷಣೆಗೆ ಮಸೂದೆ ಮಂಡಿಸಲು ಸಿದ್ಧತೆ : ಐವನ್ ಡಿಸೋಜ

ಮಂಗಳೂರು, ಜ.26: ತುಳುನಾಡಿನ ಜಾನಪದ ಕ್ರೀಡೆಯಾದ ‘ಕಂಬಳಕ್ಕೆ ಶಾಶ್ವತ ರಕ್ಷಣೆ ಒದಗಿಸಲು ಫೆ.6ರಂದು ಆರಂಭಗೊಳ್ಳುವ ಅಧಿವೇಶನದಲ್ಲಿ ಮಸೂದೆ ಮಂಡಿಸಲು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ಸರಕಾರಿ ಮುಖ್ಯಸಚೇತಕ ಐವನ್ ಡಿಸೋಜ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಈಗಾಗಲೇ ಕಾನೂನು ಸಚಿವ ಟಿ.ಬಿ.ಜಯಚಂದ್ರರ ಜೊತೆ ಮಾತುಕತೆ ನಡೆಸಲಾಗಿದೆ. ಅವರು ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಜ.30ರಂದು ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯಲ್ಲಿ ಕಂಬಳ ಪರ ತೀರ್ಪು ಪ್ರಕಟವಾಗದಿದ್ದರೆ ಸರಕಾರ ಕಂಬಳದ ರಕ್ಷಣೆಯ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಲಿದೆ. ಈ ಬಗ್ಗೆ ಕಾನೂನಿಗೆ ತಿದ್ದುಪಡಿ ತರುವ ಬದಲು ಹೊಸ ಮಸೂದೆ ರಚಿಸುವುದು ಸರಕಾರದ ಉದ್ದೇಶವಾಗಿದೆ ಎಂದರು.
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಮುಖ್ಯಮಂತ್ರಿ, ಇಲಾಖಾ ಅಧಿಕಾರಿಗಳು, ಪರಿಸರ ಹೋರಾಟಗಾರರು ಹಾಗೂ ತಜ್ಞರ ಸಭೆಯಲ್ಲಿ ಯೋಜನೆ ಪರ ವಿಷಯ ಮಂಡಿಸಿದ ಅಧಿಕಾರಿಗಳ ಪ್ರಶ್ನೆಗೆ ಯೋಜನೆಯ ವಿರುದ್ಧ ವಾದ ಮಾಡುತ್ತಿದ್ದ ಹೋರಾಟಗಾರರಲ್ಲಿ ಸೂಕ್ತ ಉತ್ತರ ಬಂದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಐವನ್ ಡಿಸೋಜ ಎಂದು ಹೇಳಿದರು.
ಸರಕಾರ ಯೋಜನೆಗೆ ಸಂಬಂಧಿಸಿದ ಚರ್ಚೆಗೆ ಈಗಲೂ ಸಿದ್ಧವಾಗಿದೆ. ಆದರೆ ಬಿಜೆಪಿ ನಿಲುವಳಿ ಮಂಡಿಸಬೇಕು. ಈ ಯೋಜನೆಗೆ ಸಂಬಂಧಿಸಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಎಂ.ಜಿ. ಹೆಗಡೆ ಮತ್ತಿತರ ಕೆಲವರಿಗೆ ಮಾತ್ರ ಗೊಂದಲವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಮುಖಂಡರಾದ ನಾಗೇಂದ್ರ ಕುಮಾರ್, ಮುಹಮ್ಮದ್ ರಫಿ, ನಝೀರ್‌ಬಜಾಲ್ , ಮನುರಾಜ್, ಮುದಸ್ಸಿರ್ ಕುದ್ರೋಳಿ, ವಾಲ್ಟರ್ ಲೋಬೊ, ಆರಿಫ್ ಬಂದರ್, ಹನೀಫ್ ಬೆಂಗರೆ, ವಸಂತ ಶೆಟ್ಟಿ ವೀರನಗರ ಉಪಸ್ಥಿತರಿದ್ದರು.







