ಕೃಷ್ಣ ಹುಟ್ಟಿದ ಆರೇ ತಿಂಗಳಲ್ಲಿ ಕಂಸ ಸತ್ತ! : ಯಡಿಯೂರಪ್ಪಗೆ ಈಶ್ವರಪ್ಪ ಕುಟುಕು

ಬಾಗಲಕೋಟೆ, ಜ. 26: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರ ಎಚ್ಚರಿಕೆಯನ್ನು ಧಿಕ್ಕರಿಸಿ ಇಲ್ಲಿನ ಕೂಡಲಸಂಗಮದಲ್ಲಿ ಮೇಲ್ಮನೆ ವಿಪಕ್ಷ ನಾಯಕ ಕೆ. ಎಸ್.ಈಶ್ವರಪ್ಪ ನೇತೃತ್ವದಲ್ಲಿ ಏರ್ಪಡಿಸಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ‘ರಾಯಣ್ಣ ಬಲಿದಾನ ದಿನ’ಕ್ಕೆ ನಿರೀಕ್ಷೆಗೂ ಮೀರಿ 1 ಲಕ್ಷಕ್ಕೂ ಅಧಿಕ ಮಂದಿ ಜನ ಸೇರುವ ಮೂಲಕ ಸಮಾವೇಶ ಯಶಸ್ವಿಯಾಗಿದೆ.
ಗುರುವಾರ ಇಲ್ಲಿನ ಹುನಗುಂದ ತಾಲೂಕಿನ ಸಮಾಜ ಸುಧಾರಕ ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮದಲ್ಲಿ ಆಯೋಜಿಸಿದ್ದ ‘ರಾಯಣ್ಣ ಬಲಿದಾನ ದಿನ’ ಸಮಾವೇಶದ ಮೂಲಕ ಕೆ.ಎಸ್.ಈಶ್ವರಪ್ಪ, ಯಡಿಯೂರಪ್ಪನವರಿಗೆ ಸೆಡ್ಡು ಹೊಡೆದಿದ್ದು, ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದಾರೆ.
‘ಕಂಸನ ವಧೆ’: ‘ಕಂಸ.. ಕೃಷ್ಣ ಹುಟ್ಟಿದ ಬಳಿಕ ಸತ್ತ..ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹುಟ್ಟಿ ಇನ್ನೂ ಆರು ತಿಂಗಳೂ ಕಳೆದಿಲ್ಲ. ಆಗಲೇ ರಾಜ್ಯದಲ್ಲಿ ನಡುಕ ಆರಂಭವಾಗಿದೆ. ಇನ್ನೂ ಒಂಭತ್ತು ತಿಂಗಳು..ವರ್ಷ ಕಳೆದರೆ ಇನ್ನೂ ಏನೇನು ಆಗುತ್ತೋ ಗೊತ್ತಿಲ್ಲ’ ಎಂದು ಮೇಲ್ಮನೆ ವಿಪಕ್ಷ ನಾಯಕ ಈಶ್ವರಪ್ಪ, ಯಡಿಯೂರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಸಮಾವೇಶದಲ್ಲಿ ಭಾರೀ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ, ‘ಕೃಷ್ಣ ಪದೇ ಪದೇ ತಪ್ಪು ಮಾಡುತ್ತಿದ್ದಾನೆ, ತಪ್ಪು ಮಾಡುತ್ತಿದ್ದಾನೆ ಎಂದು ಹೇಳುತ್ತಾರೆ. ಆದರೆ, ನಾವು ಕೃಷ್ಣನ ರೀತಿಯಲ್ಲಿ ಯಾರನ್ನೂ ವಧೆ ಮಾಡುವುದಿಲ್ಲ. ಶ್ರೀಕೃಷ್ಣ ಪೂರ್ಣರೂಪದಲ್ಲಿ ಬೆಳೆದು ಆತ ತನ್ನ ಬಾಯಿ ಬಿಟ್ಟಾಗ ಆತನ ವಿಶ್ವರೂಪ ದೇಶಕ್ಕೆ ಗೊತ್ತಾಗಲಿದೆ’ ಎಂದು ಉಲ್ಲೇಖಿಸುವ ಮೂಲಕ ಬ್ರಿಗೇಡ್ ಚಟುವಟಿಕೆಗಳನ್ನು ವಿರೋಧಿಸುವವರನ್ನು ಟೀಕಿಸಿದರು.
ಕೇವಲ ಆರು ತಿಂಗಳಲ್ಲೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೆಸರಿನಲ್ಲಿ ಹಿಂದುಳಿದವರ ಮತ್ತು ದಲಿತರು ಸೇರಿದಂತೆ ಎಲ್ಲ ಜಾತಿಯ ಬಡವರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೀರಿ. ಮುಂದಿನ ದಿನಗಳಲ್ಲಿ ನೀವೆಲ್ಲರೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನೇತೃತ್ವದಲ್ಲಿ ಶೋಷಿತರಿಗೆ ನ್ಯಾಯ ದೊರಕಿಸಿಕೊಡಲು ಬ್ರಿಗೇಡ್‌ನ ಸೈನಿಕರಾಗಬೇಕು ಎಂದು ಈಶ್ವರಪ್ಪ ಕರೆ ನೀಡಿದರು.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಾಜ್ಯದಲ್ಲಿ ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲ ಜಾತಿಯ ಶೋಷಿತ ಬಡವರಿಗೆ ನ್ಯಾಯ ದೊರಕಿಸಿಕೊಡಲು ಹೊರಟಿದೆ ಎಂದ ಈಶ್ವರಪ್ಪ, ಬಡವರ ಪರವಾಗಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳು ಎಂದಿಗೂ ನಿಲ್ಲದು ಎಂದರು.
ಸ್ವಾಮೀಜಿಗಳ ಗೈರು: ಸಮಾವೇಶದಲ್ಲಿ ಕಾಗಿನೆಲೆ ಮಠದ ನಿರಂಜನಾನಂದಪುರಿ ಸ್ವಾಮಿ, ಲಿಂಗಾಯತ ಪಂಜಮಸಾಲಿ ಮಠದ ಜಯಮೃತ್ಯುಂಜಯ ಸ್ವಾಮಿ, ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿ, ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿ, ಉಪ್ಪಾರ ಪೀಠದ ಪುರುಷೋತ್ತಮಾನಂದ ಸ್ವಾಮಿ, ಅಂಬಿಗರ ಚೌಡಯ್ಯ ಸ್ವಾಮಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ, ಕೃಷ್ಣ ಯಾದವಾನಂದ ಸ್ವಾಮಿ ಸೇರಿದಂತೆ ಪ್ರಮುಖರು ಗೈರುಹಾಜರಿ ಎದ್ದುಕಾಣುತ್ತಿತ್ತು.
ನೀರು-ಊಟ: ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರಿಗೆ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆರಂಭಕ್ಕೆ ಸ್ವಾಮೀಜಿಗಳು, ಕೆ.ಎಸ್. ಈಶ್ವರಪ್ಪ ಸೇರಿದಂತೆ ಮುಖಂಡರನ್ನು ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಲಾ ತಂಡಗಳೊಂದಿಗೆ ಆಕರ್ಷಕ ಮೆರವಣಿಗೆ ನಡೆಸಲಾಯಿತು.
ಸಮಾವೇಶದಲ್ಲಿ ಮಾಜಿ ಸಂಸದ ಹಾಗೂ ಬ್ರಿಗೇಡ್ ಅಧ್ಯಕ್ಷ ವಿರೂಪಾಕ್ಷಪ್ಪ, ಮಾಜಿ ಸಚಿವರಾದ ಸೊಗಡು ಶಿವಣ್ಣ, ರವೀಂದ್ರನಾಥ್, ಕಾರ್ಯಾಧ್ಯಕ್ಷ ಕೆ. ಮುಕುಡಪ್ಪ, ಮೇಲ್ಮನೆ ಸದಸ್ಯ ಸೋಮಣ್ಣ ಬೇವಿನ ಮರದ, ಬಿಬಿಎಂಪಿ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಮೋದಿಗೆ ಆಹ್ವಾನ: ರಾಯಣ್ಣ ಬ್ರಿಗೇಡ್ ಚುಟುವಟಿಕೆಗಳನ್ನು ಬಹಳಷ್ಟು ಜನರ ವಿರೋಧಿಸುತ್ತಿರುವವರು ಗಮನಿಸಬೇಕು. ಕೂಡಲಸಂಗಮದ ಸಮಾವೇಶ ಬರೀ ಸ್ಯಾಂಪಲ್ ಅಷ್ಟೇ. ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ಏರ್ಪಡಿಸಲಿದ್ದು, ಪ್ರಧಾನಿ ಮೋದಿ ಅವರನ್ನು ಆಹ್ವಾನಿಸುತ್ತೇವೆ’
-ಕೆ.ಎಸ್.ಈಶ್ವರಪ್ಪ ಮೇಲ್ಮನೆ ವಿಪಕ್ಷ ನಾಯಕ







