ಉಡುಪಿ: 529 ಅರಣ್ಯವಾಸಿಗಳಿಗೆ 699 ಎಕರೆ ಭೂಮಿ ಹಕ್ಕುಪತ್ರ

ಉಡುಪಿ, ಜ.26: ಜಿಲ್ಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ವಾಸ್ತವ್ಯ ಹೂಡಿರುವ 529 ಫಲಾನುಭವಿಗಳಿಗೆ ಅರಣ್ಯಹಕ್ಕು ಕಾಯ್ದೆಯಡಿಯಲ್ಲಿ ಒಟ್ಟು 699.62 ಎಕರೆ ಅರಣ್ಯ ಭೂಮಿಯ ಹಕ್ಕುಪತ್ರಗಳನ್ನು ನೀಡಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ನಗರಸಭಾ ವ್ಯಾಪ್ತಿಯ ಬೀಡಿನಗುಡ್ಡೆಯ ಮಹಾತ್ಮಗಾಂಧಿ ಬಯಲು ರಂಗಮಂದಿರದಲ್ಲಿ ನಡೆದ ದೇಶದ 68ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವ ಸಂದೇಶ ನೀಡಿ ಮಾತನಾಡುತಿದ್ದರು.
ಕೇಂದ್ರದ ಉಜ್ವಲ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ರಾಜ್ಯ ಸರಕಾರವು ಗರಿಷ್ಠ ಒಂದು ಸಾವಿರ ರೂ.ಗಳ ಸಹಾಯಧನದಲ್ಲಿ ಎರಡು ಬರ್ನರ್ ಉಳ್ಳ ಗ್ಯಾಸ್ ಸ್ಟವ್ ನೀಡಲು ನಿರ್ಧರಿಸಿದ್ದು, ಅದರಂತೆ ಉಡುಪಿ ಜಿಲ್ಲೆಯಲ್ಲಿ ಈ ಯೋಜನೆಯಡಿ ಪ್ರಸ್ತುತ 2,977 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ ಜಿಲ್ಲೆಗೆ ಸರಕಾರದಿಂದ ಈವರೆಗೆ 63 ಕೋಟಿ ರೂ.ಅನುದಾನವನ್ನು ವಿನಿಯೋಜಿಸಲಾಗಿದೆ ಎಂದವರು ನುಡಿದರು.
ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಅಪಘಾತಗಳಿಂದ ಸಂಕಷ್ಟಕ್ಕೆ ಸಿಲುಕಿದ ಖಾಸಗಿ ಅಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಲಾರಿ ಮತ್ತು ಖಾಸಗಿ ಬಸ್ ವಾಹನ ಚಾಲಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ನೆರವು ನೀಡಲು ರಾಜ್ಯ ಸರಕಾರ ‘ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಚಾಲಕರ ಅಪಘಾತ ಪರಿಹಾರ ಯೋಜನೆ’ ಎಂಬ ಉಚಿತ ಅಪಘಾತ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ ಎಂದರು.
2016-17ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಜನಾಂಗದವರ ಶ್ರೇಯೋಭಿವೃದ್ಧಿಗಾಗಿ ಒಟ್ಟು 11.39 ಕೋಟಿ ರೂ.ಅನುದಾನವನ್ನು ನಿಗದಿ ಪಡಿಸಲಾಗಿದ್ದು, ಈವರೆಗೆ 11.35 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ ಎಂದರು.
ಅಲ್ಪಸಂಖ್ಯಾತರ ಇಲಾಖೆಯ ಬಿದಾಯಿ ಯೋಜನೆಯಡಿ 224 ಫಲಾನುಭವಿಗಳಿಗೆ 1.12ಕೋಟಿ ರೂ.ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಆರು ಚರ್ಚ್‌ಗಳ ದುರಸ್ಥಿತಿಗೆ 1.12 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಎರಡು ಶಾದಿ ಮಹಲ್ ನಿರ್ಮಾಣಕ್ಕೆ 50 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ ಎಂದು ಪ್ರಮೋದ್ ನುಡಿದರು.
ಕಾರ್ಕಳ ತಾಲೂಕಿನಲ್ಲಿ 1.22ಕೋಟಿ ರೂ.ವೆಚ್ಚದಲ್ಲಿ ಡಿ.ದೇವರಾಜ ಅರಸು ಭವನ ನಿರ್ಮಾಣಕ್ಕೆ ಸರಕಾರ ಮಂಜೂರಾತಿ ನೀಡಿದ್ದು, ಪ್ರಥಮ ಕಂತಾಗಿ 61 ಲಕ್ಷರೂ.ಗಳನ್ನು ಬಿಡುಗಡೆ ಮಾಡಿದೆ. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಐಡಿಎಸ್‌ಎಂಟಿ ಯೋಜನೆಯಡಿ ಗೋಪಾಲಪುರ ವಾರ್ಡಿನ ಸಂತೆಕಟ್ಟೆಯಲ್ಲಿ 1.52ಕೋಟಿ ರೂ.ಮೊತ್ತದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣವನ್ನು ಕೈಗೆತ್ತಿ ಕೊಳ್ಳಲಾಗಿದೆ. ಅಲೆವೂರು ಗ್ರಾಮದ ಕರ್ವಾಲಿನಲ್ಲಿ ಎರಡು ಕೋಟಿ ರೂ.ಅಂದಾಜು ವೆಚ್ಚದಲ್ಲಿ ಹೆಚ್ಚುವರಿ ವಿಂಡ್ರೋ ಕಾಂಪೋಸ್ಟ್ ಯಾರ್ಡ್ ಘಟಕ ಸ್ಥಾವರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದರು.
ನಬಾರ್ಡ್ ಯೋಜನೆಯಡಿ ಕಲ್ಮಾಡಿ ಬೊಬ್ಬರ್ಯಪಾದೆ ಹಾಗೂ ಅಳಿವೆಗದ್ದೆ ಎಂಬಲ್ಲಿ ಜೆಟ್ಟಿ ನಿರ್ಮಾಣಕ್ಕೆ ತಲಾ ಎರಡು ಕೋಟಿ ರೂ. ಹಾಗೂ 2.80 ಕೋಟಿ ರೂ. ಹಾಗೂ ಹೆಜಮಾಡಿ ನಡಿಪಟ್ಲದಲ್ಲಿ ಸೇತುವೆ ನಿರ್ಮಾಣಕ್ಕೆ 80 ಲಕ್ಷ ರೂ.ಗಳಿಗೆ ಮಂಜೂರಾತಿ ದೊರಕಿದ್ದು, ಟೆಂಡರ್ ಪ್ರಕ್ರಿಯೆ ಕಾರ್ಯ ನಡೆಯುತ್ತಿದೆ ಎಂದವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆದಿದ್ದು, ಸಚಿವರು ಗೌರವ ರಕ್ಷೆ ಸ್ವೀಕರಿಸಿದರು.
ಗಣರಾಜ್ಯೋತ್ಸವ ಸಂದೇಶದ ಬಳಿಕ ರಾಜ್ಯ ಸರಕಾರಿ ಸೇವೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಆರು ಮಂದಿ ಸರಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಅಲ್ಲದೇ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನ, ಬೆಳ್ಳಿ ಪದಕಗಳು ಸೇರಿದಂತೆ ಬಹುಮಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ನಗದು ಬಹುಮಾನಗಳನ್ನು ನೀಡಿ ಸಚಿವರು ಗೌರವಿಸಿದರು. ಕೊನೆಯಲ್ಲಿ ಉಡುಪಿ ಆಸುಪಾಸಿನ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶಿಸಲ್ಪಟ್ಟವು.
ಕಾರ್ಯಕ್ರಮದಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಪಂ ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಅನುರಾಧ ಉಪಸ್ಥಿತರಿದ್ದರು.







