ರಶ್ಯಕ್ಕೆ ಮರಳುತ್ತಿರುವ ‘ಅವಮಾನಕರ ನೌಕೆ’: ಬ್ರಿಟನ್

ಲಂಡನ್, ಜ. 26: ಸಿರಿಯದ ಬಂಡುಕೋರ ನಿಯಂತ್ರಣದಲ್ಲಿದ್ದ ನಗರ ಅಲೆಪ್ಪೊದ ಮೇಲೆ ಭೀಕರ ದಾಳಿ ನಡೆಸಲು ಬಳಸಲಾದ ರಶ್ಯದ ವಿಮಾನವಾಹಕ ನೌಕೆ ‘ಅಡ್ಮಿರಲ್ ಕುಝ್ನೆತ್ಸೊವ್’ ರಶ್ಯಕ್ಕೆ ಮರಳುತ್ತಿದೆ ಎಂದು ಬ್ರಿಟನ್ ರಕ್ಷಣಾ ಸಚಿವ ಮೈಕಲ್ ಫಾಲನ್ ಬುಧವಾರ ಹೇಳಿದ್ದಾರೆ.
‘‘ಅದು ಅವಮಾನಕರ ನೌಕೆ’’ ಎಂಬುದಾಗಿ ಹೇಳಿಕೆಯೊಂದರಲ್ಲಿ ಅವರು ಬಣ್ಣಿಸಿದ್ದಾರೆ.
‘‘ರಶ್ಯಕ್ಕೆ ಮರಳುತ್ತಿರುವ ಆ ದೇಶದ ವಿಮಾನವಾಹಕ ನೌಕೆ ‘ಅಡ್ಮಿರಲ್ ಕುಝ್ನೆತ್ಸೊವ್’ ರಶ್ಯಕ್ಕೆ ಮರಳುತ್ತಿದ್ದು, ನಾವು ಅದರ ಮೇಲೆ ನಿಕಟ ನಿಗಾ ಇಟ್ಟಿದ್ದೇವೆ’’ ಎಂದರು.
ಅಲೆಪ್ಪೊ ನಗರದ ಬಂಡುಕೋರ ನಿಯಂತ್ರಣದ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ತನ್ನ ಮಿತ್ರ ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸ್ಸಾದ್‌ಗೆ ಸಹಾಯ ಮಾಡುವುದಕ್ಕಾಗಿ ರಶ್ಯವು ಕಳೆದ ವರ್ಷ ಸಿರಿಯಕ್ಕೆ ಉತ್ತರ ಸಮುದ್ರದ ಮೂಲಕ ಯುದ್ಧ ನೌಕೆಯನ್ನು ಕಳುಹಿಸಿಕೊಟ್ಟಿತ್ತು.
ಬಳಿಕ ಅಲೆಪ್ಪೊದಲ್ಲಿ ನಡೆದ ಭೀಕರ ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ಸಾವಿರಾರು ನಾಗರಿಕರು ಮತ್ತು ಬಂಡುಕೋರರು ನಗರವನ್ನು ಬಿಟ್ಟು ತೆರಳಿದ್ದಾರೆ. ಸಿರಿಯದಲ್ಲಿ 2011ರಲ್ಲಿ ಆರಂಭವಾದ ಆಂತರಿಕ ಕಲಹ, ಸರಕಾರಿ ಪಡೆಗಳು ಅಲೆಪ್ಪೊವನ್ನು ಕಳೆದ ತಿಂಗಳು ನಿಯಂತ್ರಣಕ್ಕೆ ತೆಗೆದುಕೊಳ್ಳುವುದರೊಂದಿಗೆ ಒಂದು ಹಂತದ ಮುಕ್ತಾಯವನ್ನು ಕಂಡಿದೆ.
‘‘ರಶ್ಯದ ಈ ಯುದ್ಧ ನೌಕೆಯು ಸಿರಿಯದ ಜನರ ಯಾತನೆಯನ್ನು ಹೆಚ್ಚಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ, ಹಾಗಾಗಿ ಅದು ಅವಮಾನಕರ ನೌಕೆಯಾಗಿದೆ’’ ಎಂದು ಬ್ರಿಟನ್ ರಕ್ಷಣಾ ಸಚಿವರು ಬಣ್ಣಿಸಿದ್ದಾರೆ.







