ಕೇರಳದಲ್ಲಿ ಸಮುದ್ರದಡಿ ಮದುವೆಯಾದ ಜೋಡಿ
.jpg)
ತಿರುವನಂತಪುರಂ,ಜ.26: ವಿಶಿಷ್ಟ ಮದುವೆ ಸಮಾರಂಭವೊಂದಕ್ಕೆ ಕೇರಳವು ಗುರುವಾರ ಸಾಕ್ಷಿಯಾಯಿತು. ಇಲ್ಲಿಗೆ ಸಮೀಪದ ಕೋವಳಮ್‌ನಲ್ಲಿ ಭಾರತೀಯ ವರ ಮತ್ತು ಸ್ಲೋವಾಕಿಯಾದ ವಧು ಸಮುದ್ರದ ಅಡಿ ದಾಂಪತ್ಯ ಜೀವನವನ್ನು ಪ್ರವೇಶಿಸಿದರು.
ಮದುಮಕ್ಕಳ ವೇಷಭೂಷಣಗಳನ್ನು ತೊಟ್ಟು ಸ್ಕೂಬಾ ಡೈವಿಂಗ್ ಸಾಧನವನ್ನು ಅಳವಡಿಸಿಕೊಂಡಿದ್ದ ಮಹಾರಾಷ್ಟ್ರದ ನಿಖಿಲ್ ಪವಾರ್ ಮತ್ತು ಸ್ಲೋವಾಕಿಯಾದ ಯುನಿಕಾ ಪೋಗ್ರನ್ ಅವರು ಸಮುದ್ರದಡಿ ಪುಟ್ಟ ಸಮಾರಂಭದಲ್ಲಿ ಪರಸ್ಪರ ಉಂಗುರಗಳು ಮತ್ತು ಕಪ್ಪೆಚಿಪ್ಪುಗಳಿಂದ ಮಾಡಿದ್ದ ಮಾಲೆಗಳನ್ನು ಬದಲಾಯಿಸಿಕೊಂಡು ಸತಿಪತಿಗಳಾದರು.

ನಯನಮನೋಹರ ಕೋವಳಮ್‌ನಲ್ಲಿ ಬೆಳಿಗ್ಗೆ ಸುಮಾರು ಒಂದು ಗಂಟೆ ಕಾಲ ನಡೆದ ಈ ವಿಶಿಷ್ಟ ಮದುವೆಗಾಗಿ ನೀರಿನಡಿ ಪುಟ್ಟ ವೇದಿಕೆಯೊಂದನ್ನು ರಚಿಸಲಾಗಿತ್ತು. ಈ ವೇದಿಕೆಯಲ್ಲಿ ನಿಂತಿದ್ದ ಜೋಡಿಗೆ ಮುದ್ರಿತ ಪ್ರಶ್ನಾವಳಿಯನ್ನು ನೀಡಲಾಗಿದ್ದು,ಅವರು ಸನ್ನೆಯ ಮೂಲಕ ಉತ್ತರಗಳನ್ನು ನೀಡಿದ್ದರು.
ಕೋವಳಮ್‌ನಲ್ಲಿ ಮುಳುಗುಗಾರನಾಗಿರುವ ನಿಖಿಲ್,ತನ್ನ ಕನಸು ಇಂದು ನನಸಾಯಿತು ಎಂದು ನೀರಿನಿಂದ ಮೇಲಕ್ಕೆ ಬಂದ ಬಳಿಕ ಉದ್ಗರಿಸಿದರು. ಆದರೆ ಯುನಿಕಾ ಮಾತ್ರ ತನಗೂ ಸಂತಸವಾಗಿದೆ,ಆದರೆ ನೀರಿನಲ್ಲಿ ಕೊಂಚ ಆತಂಕ ಕಾಡಿತ್ತು ಎಂದರು.

ಇದು ಭಾರತದಲ್ಲಿ ಸಮುದ್ರದಡಿ ನಡೆದಿರುವ ಮೊದಲ ಮದುವೆ ಎಂದು ಸಂಘಟಕರು ಹೇಳಿದ್ದಾರೆ.
ನವದಂಪತಿ ತಮ್ಮ ಮದುವೆಯನ್ನು ಮಹಾರಾಷ್ಟ್ರದಲ್ಲಿ ನೋಂದಣಿ ಮಾಡಿಕೊಳ್ಳಲಿದ್ದಾರೆ.


ಚಿತ್ರ ಕೃಪೆ:thenewsminute.com







