ಸುಳ್ಯದಲ್ಲಿ 68ನೇ ಗಣರಾಜ್ಯೋತ್ಸವ ಸಮಾರಂಭ

ಸುಳ್ಯ , ಜ.26 : ಸುಳ್ಯ ತಾಲೂಕು ರಾಷ್ಟ್ರೀಯ ನಾಡಹಬ್ಬಗಳ ದಿನಾಚರಣಾ ಸಮಿತಿ ಆಶ್ರಯದಲ್ಲಿ 68ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.
ತಹಶೀಲ್ದಾರ್ ಎಂ.ಎಂ.ಗಣೇಶ್ ಧ್ವಜಾರೋಹಣ ನೆರವೇರಿಸಿ ಪೆರೇಡ್ ವಂದನೆ ಸ್ವೀಕರಿಸಿದರು. ಪೊಲೀಸ್, ನಿವೃತ್ತ ಸೈನಿಕರ ಸಂಘ, ಗ್ರಹ ರಕ್ಷಕ ದಳ, ಎನ್‌ಸಿಸಿ, ಯುವ ರೆಡ್‌ಕ್ರಾಸ್, ಸ್ಕೌಟ್ಸ್-ಗೈಡ್ಸ್ ಸೇರಿದಂತೆ ವಿವಿಧ ಶಾಲೆಗಳ ತಂಡಗಳು ಪೆರೇಡ್‌ನಲ್ಲಿ ಭಾಗವಹಿಸಿದ್ದವು.
ಬಳಿಕ ಸಂದೇಶ ನೀಡಿದ ತಹಶೀಲ್ದಾರ್ ಎಂ.ಎಂ.ಗಣೇಶ್, ರಾಷ್ಟ್ರ ಧ್ವಜದ ಗೌರವವನ್ನು ಕಾಪಾಡುವುದು ನಮ್ಮ ಧರ್ಮವಾಗಬೇಕು. ಮಾನವ ಹಕ್ಕುಗಳಿಗೆ ಬೆಲೆ ನೀಡಬೇಕು. ದೇಶ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಯೋಜನೆಗಳ ಅನುಷ್ಠಾನದಲ್ಲಿ ಹಲವು ಸವಾಲುಗಳೂ ಇವೆ. ಅವುಗಳನ್ನು ಎದುರಿಸಿದಲ್ಲಿ ಗಣತಂತ್ರ ವ್ಯವಸ್ಥೆ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ ಎಂದವರು ಹೇಳಿದರು.
ಗಣರಾಜ್ಯೋತ್ಸವ ಸಮಾರಂಭದಲ್ಲಿ ತಾಲೂಕು ಮಟ್ಟದ ಉತ್ತಮ ರೈತ ಪ್ರಶಸ್ತಿ ಪ್ರದಾನ ಮಾಡಲಾಯಿತು. 6 ಮಂದಿ ಮುಳುಗು ತಜ್ಞರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಮುಳುಗು ತಜ್ಞರಾದ ಎಸ್.ಎಂ.ಮುಹಮ್ಮದ್ ಬಶೀರ್, ಎಸ್.ಎಂ.ಅಬ್ಬಾಸ್, ಟಿ.ಎ.ಶರೀಫ್, ಶೇಖಾಲಿ, ಅಬ್ದುಲ್ಲ, ಬಿ.ಎಲ್.ಲತೀಫ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ತಾಲೂಕು ಮಟ್ಟದ ಉತ್ತಮ ರೈತ ಪ್ರಶಸ್ತಿ ಪಡೆದ ದೇವಿಪ್ರಸಾದ್, ಕುಶಾಲಪ್ಪ ಗೌಡ, ಲಕ್ಷ್ಮಣ ಗೌಡರಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಅಂಗಾರ ಪ್ರಶಸ್ತಿ ಪ್ರದಾನ ಮಾಡಿದರು.
ಕೆವಿಜಿ ದತ್ತಿನಿಧಿಯಿಂದ ಕನ್ನಡ ಮಾಧ್ಯಮ ಮಕ್ಕಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನಿನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಬಹುಮಾನ ವಿತರಿಸಿದರು.
ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಎಪಿಎಂಸಿ ಅಧ್ಯಕ್ಷ ಜಾಕೆ ಮಾಧವ ಗೌಡ, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ, ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮೂಂಡೋಡಿ ಶುಭ ಹಾರೈಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾಇ ಆರ್.ಮಧುಕುಮಾರ್ ವೇದಿಕೆಯಲ್ಲಿದ್ದರು. ಬಿಇಒ ಬಿ.ಎಸ್.ಕೆಂಪಲಿಂಗಪ್ಪ ಸ್ವಾಗತಿಸಿ, ಪ್ರಾಂಶುಪಾಲ ಎಂ.ಎಸ್.ಚಿದಾನಂದ ವಂದಿಸಿದರು. ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.







