ಇಂಡಿಯಾ ಟುಡೇ-ಕರ್ವಿ ಸಮೀಕ್ಷೆ : ಈಗ ಚುನಾವಣೆ ನಡೆದರೆ ಎನ್‌ಡಿಎಗೆ ಎಷ್ಟು ಸ್ಥಾನ ?
ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ ಯಾರಿಗೆ

ಹೊಸದಿಲ್ಲಿ, ಜ.26: ಒಂದು ವೇಳೆ ಈಗ ಲೋಕಸಭೆಗೆ ಚುನಾವಣೆ ನಡೆದರೆ ಮೋದಿ ನೇತೃತ್ವದ ಎನ್‌ಡಿಎ 360 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಗೆ ಕೇವಲ 60 ಸ್ಥಾನ ಲಭಿಸುತ್ತದೆ..
ಇದು ಇಂಡಿಯಾ ಟುಡೇ- ಕರ್ವಿ ನಡೆಸಿದ ಸಮೀಕ್ಷೆಯ ಫಲಿತಾಂಶ. ನೋಟು ಅಮಾನ್ಯಗೊಳಿಸಿದ ಮೋದಿ ಕ್ರಮವನ್ನು ಜನರು ಬೆಂಬಲಿಸಿದ್ದಾರೆ ಎಂದು ಸಮೀಕ್ಷೆಯ ಫಲಿತಾಂಶ ತಿಳಿಸುತ್ತದೆ. ಡಿ.30ರಿಂದ ಜನವರಿ 9ರವರೆಗೆ 19 ರಾಜ್ಯಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ.
ದಿ ವೀಕ್- ಹಂಸ ರಿಸರ್ಚ್ ಸಂಸ್ಥೆ ನಡೆಸಿದ ಮತ್ತೊಂದು ಸಮೀಕ್ಷೆ ಪ್ರಕಾರ ಉತ್ತರಪ್ರದೇಶ ಮತ್ತು ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಕಾಂಗ್ರೆಸ್ ಪಂಜಾಬ್‌ನಲ್ಲಿ ಗೆಲುವು ಸಂಪಾದಿಸಲಿದೆ. ಉತ್ತರಪ್ರದೇಶದಲ್ಲಿ ಬಿಜೆಪಿಗೆ 192ರಿಂದ 196 ಸ್ಥಾನ, ಎಸ್‌ಪಿ- ಕಾಂಗ್ರೆಸ್ ಮೈತ್ರಿಕೂಟಕ್ಕೆ 178-182, ಬಿಎಸ್‌ಪಿಗೆ ಕೇವಲ 20-24 ಸ್ಥಾನ ದೊರಕಲಿದೆ.
117 ಸದಸ್ಯಬಲದ ಪಂಜಾಬ್ ವಿಧಾನಸಭೆಯಲ್ಲಿ ಕಾಂಗ್ರೆಸ್ 49ರಿಂದ 51ಸ್ಥಾನ ಪಡೆದರೆ, ಆಪ್ ಪಕ್ಷ 33-35 ಸ್ಥಾನ ಪಡೆಯಲಿದೆ. ಶಿರೋಮಣಿ ಅಕಾಲಿದಳ-ಬಿಜೆಪಿ ಮೈತ್ರಿಕೂಟ 28ರಿಂದ 30 , ಇತರರು 3ರಿಂದ 5 ಸ್ಥಾನ ಪಡೆಯಲಿದ್ದಾರೆ.





