ಮಡಿಕೇರಿ: ಅಂಬೇಡ್ಕರ್ ಭವನ-ಪುತ್ಥಳಿ ಸ್ಥಾಪನೆಗೆ ಆಗ್ರಹ
ಮಡಿಕೇರಿ, ಜ.26: ಜಿಲ್ಲಾ ಕೇಂದ್ರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಮತ್ತು ಭವನ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಗಣರಾಜ್ಯೋತ್ಸವ ದಿನವಾದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್. ದಿವಾಕರ್ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸಂಘಟನೆಯ ಪ್ರಮುಖರು ಮತ್ತು ಕಾರ್ಯಕರ್ತರು, ಘೋಷಣೆಗಳ ಸಹಿತ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಿಂದ ನಗರದ ಮುಖ್ಯ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೆೇರಿ ಮುಂಭಾಗದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕ ದಿವಾಕರ್ ಮಾತನಾಡಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಸಾಲಿನ ಆ.14ರಂದು ಗಾಂಧಿ ಮೈದಾನದಲ್ಲಿ ಮಧ್ಯ ರಾತ್ರಿ ಪ್ರತಿಭಟನೆ ನಡೆಸಿದ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ದಲಿತರ ಪರವಾದ ಬೇಡಿಕೆಗಳು ಈಡೇರಿಲ್ಲವೆಂದು ಆರೋಪಿಸಿದರು. ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಸಂವಿಧಾನ ಶಿಲ್ಪಿಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಆದರೆ, ಕೊಡಗು ಜಿಲ್ಲೆಯಲ್ಲಿ ಮಾತ್ರ ಪ್ರತಿಮೆಯನ್ನು ಸ್ಥಾಪಿಸಿಲ್ಲ ಮತ್ತು ದಲಿತ ಸಂಘರ್ಷ ಸಮಿತಿಯ 24 ವರ್ಷಗಳ ಈ ಬೇಡಿಕೆಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ದಲಿತರ ಬೇಡಿಕೆಗಳನ್ನು ಈಡೇರಿಸದ ಹೊರತು ಡಾ.ಅಂಬೇಡ್ಕರ್ ಜಯಂತಿ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಆಚರಣೆಗಳು ಅರ್ಥಹೀನವೆನಿಸುತ್ತವೆ ಎಂದು ದಿವಾಕರ್ ಅಭಿಪ್ರಾಯಿಸಿದರು.
ಮಡಿಕೇರಿ ನಗರದಲ್ಲಿ ಡಾ.ಅಂಬೇಡ್ಕರ್ ಭವನ ನಿರ್ಮಾಣಕ್ಕೆ 5 ಕೋಟಿ ರೂ. ಮಂಜೂರು ಮಾಡ ಬೇಕು ಮತ್ತು ಜಾಗವನ್ನು ಗುರುತಿಸಿ ಸರಕಾರವೇ ಕಟ್ಟಡ ನಿರ್ಮಾಣ ಮಾಡ ಬೇಕು.
ನಗರದಲ್ಲಿ ಡಾ.ಅಂಬೇಡ್ಕರ್ ಅವರ ಪ್ರತಿಮೆಯನ್ನು 50 ಲಕ್ಷ ರೂ. ವೆಚ್ಚದಲ್ಲಿ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಬೇಕು. ನಿವೇಶನ ರಹಿತರಿಗೆ ಹಾಗೂ ವಸತಿ ರಹಿತರಿಗೆ ತಲಾ ಮೂರು ಎಕರೆ ಪೈಸಾರಿ ಜಾಗವನ್ನು ಸರಕಾರ ಮಂಜೂರು ಮಾಡಬೇಕು ಹಾಗೂ ಶಿಕ್ಷಣ ವಂಚಿತರಾಗಿರುವ ದಲಿತ ಮಕ್ಕಳಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಶಿಕ್ಷಣ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟ ನೆಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಈರಪ್ಪ, ರವಿ, ಕುಶಾಲನಗರ ಹೋಬಳಿ ಸಂಚಾಲಕ ಎಚ್.ಡಿ. ಚಂದ್ರು, ಸೋಮವಾರಪೇಟೆ ತಾಲೂಕು ಸಂಚಾಲಕ ರವಿ ಸೇರಿದಂತೆ ಪ್ರಮುಖರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.







