ಬೆಳ್ತಂಗಡಿ : ಗಣರಾಜ್ಯೋತ್ಸವ ದಿನಾಚರಣೆ

ಬೆಳ್ತಂಗಡಿ , ಜ.26 : ರಾಷ್ಟ್ರ ನಾಯಕರು ನಡೆಸಿದ ಹೋರಾಟದಿಂದ ನಮ್ಮ ದೇಶ ಸ್ವತಂತ್ರವಾಗಿದೆ. ನಾವು ಸರ್ವ ಸ್ವತಂತ್ರರಾಗಿದ್ದು ನಮ್ಮ ಪ್ರಜಾಪ್ರಭುತ್ವ ಜಗತ್ತಿಗೆ ಮಾದರಿಯಾಗಿದೆ. ಯುವ ಜನತೆ ರಾಷ್ಟ್ರ ಪ್ರೇಮದೊಂದಿಗೆ ದೇಶದ ಅಭಿವೃದ್ಧಿಯಾಗಲು ಸ್ವಉದ್ಯೋಗಗಳನ್ನು ಮಾಡಿ ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂದು ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷ, ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು, ಗುರುವಾರ ಬೆಳ್ತಂಗಡಿ ವಾಣಿ ಪ. ಪೂ. ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ನಡೆದ 68ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುವಕ, ಯುವತಿಯರು ಸ್ವ ಉದ್ಯೋಗಿಗಳಾಗಬೇಕು. ಮೇಲಂತಬೆಟ್ಟುವಿನಲ್ಲಿ ಮೀಸಲಿಟ್ಟ 10 ಎಕ್ರೆ ಜಾಗದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಚಾಲನೆ ನೀಡಿ ಸ್ವಉದ್ಯೋಗ ಮಾಡಲು ಪ್ರೇರೇಪಿಸುವ ಮೂಲಕ ರಾಜ್ಯದ ವಿವಿಧ ಭಾಗಗಳಲ್ಲಿ ಅಭಿವೃದ್ಧಿ ಮಾಡಲು ಬೆಳ್ತಂಗಡಿಯಲ್ಲೇ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದ ಅವರು, ತಾಲೂಕಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾತಿ ಹಾಗೂ ತಣ್ಣೀರುಪಂತದಲ್ಲಿ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದೇನೆ ಎಂದರು.
ಪ್ರತಕರ್ತ ಆರ್. ಎನ್. ಪೂವಣಿ ಮಾತನಾಡಿ , ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಯಾವುದೇ ಕೆಲಸಗಳು ಆಜ್ಞೆಯಿಂದ ಆಗದು. ಸ್ವಯಂ ಪ್ರಜ್ಞೆಯಿಂದ ಮಾಡಬೇಕು. ಮನಸ್ಸು ಪ್ರವಿತ್ರವಾಗಿದ್ದರೆ ಸ್ವಚ್ಛ ಭಾರತದ ಕನಸು ನನಸಾಗುತ್ತದೆ. ನಮ್ಮ ಮನಸ್ಸು, ಮನೆ, ಪರಿಸರ ಸ್ವಚ್ಛ ಮಾಡಿದಾಗ ಮಾತ್ರ ಸ್ವಚ್ಛ ಭಾರತದ ಕಲ್ಪನೆಗೆ ಅರ್ಥ ಬರುತ್ತದೆ. ದೇಶ ಕಟ್ಟುವ ಕೆಲಸ ಯು ಜನತೆಯಿಂದ ಆಗಬೇಕು ಎಂದರು.
ಬೆಳ್ತಂಗಡಿ ತಹಶೀಲ್ದಾರ್ ಹೆಚ್. ಕೆ. ತಿಪ್ಪೇ ಸ್ವಾಮಿ ಧ್ವಜಾರೋಹಣ ಮಾಡಿ ಶುಭಹಾರೈಸಿದರು.
ವೇದಿಕೆಯಲ್ಲಿ ತಾಪಂ ಅಧ್ಯಕ್ಷೆ ದಿವ್ಯಜ್ಯೋತಿ, ಜಿಪಂ ಸದಸ್ಯೆ ಮಮತಾ ಶೆಟ್ಟಿ, ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸೋಮೇಗೌಡ, ನಿವೃತ್ತ ಸೇನಾನಿ ಎಂ. ಆರ್. ಜೈನ್, ತಾ ಆರೋಗ್ಯಾಧಿಕಾರಿ ಡಾ ಕಲಾಮಧು, ಅಕ್ಷರ ದಾಸೋಹದ ಸ. ನಿರ್ದೇಶಕ ಲಕ್ಷ್ಮಣ ಶೆಟ್ಟಿ, ಲೋಕೋಪಯೋಗಿ ಸ. ಕಾರ್ಯಪಾಲಕ ಇಂಜಿನಿಯರ್ ಶಿವಪ್ರಸಾದ್ ಅಜಿಲ, ಕೃಷಿ ಇಲಾಖಾ ಸ. ನಿರ್ದೇಶಕ ತಿಲಕ ಪ್ರಸಾದ್, ಸಿಡಿಪಿಓ ಸರಸ್ವತಿ ಇದ್ದರು.
ಇದೇ ಸಂದರ್ಭ 2015-16ನೇ ಸಾಲಿನಲ್ಲಿ ಕೃಷಿ ಪ್ರಶಸ್ತಿ ಯೋಜನೆಯಡಿ ಭತ್ತದ ಬೆಳೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಬೆಳಾಲು ಗ್ರಾಮದ ಸುರುಳಿ ಮನೆ ಶಿವಮ್ಮ, ಗರ್ಡಾಡಿಯ ನಿತ್ಯಾನಂದ ಶೆಟ್ಟಿ, ಪಡ್ಡಂದಡ್ಕದ ಜೆರೋಮಿಯಸ್ ಮೊರಾಸ್, ತಾಲೂಕು ಪ್ರಶಸ್ತಿ ಪಡೆದ ಉಜಿರೆಯ ಸದಾಶಿವ ಶೆಟ್ಟಿ ಲಾಲದ ಬೋಜ ಮಲೆಕುಡಿಯ, ನಾಲ್ಕೂರು ಗ್ರಾಮದ ನಾರಾಯಣ ಪೂಜಾರಿ ಇವರನ್ನು ಗೌರವಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಸ್ವಾಗತಿಸಿದರು. ಪತ್ರಕರ್ತ ದೇವಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
ವಿವಿಧ ಶಾಲೆಯ ಮಕ್ಕಳಿಂದ ಆಕರ್ಷಕ ಮೆರವಣಿಗೆ ನಡೆಯಿತು.







