ಸಹೋದರಿಯರ ಅತ್ಯಾಚಾರ ಪ್ರಕರಣ
ಇಬ್ಬರು ಆರೋಪಿಗಳಿಗೆ ಏಳು ವರ್ಷ ಶಿಕ್ಷೆ
ಶಿವಮೊಗ್ಗ, ಜ.26: ಅಪ್ರಾಪ್ತ ವಯಸ್ಸಿನ ಇಬ್ಬರು ಬಾಲಕಿಯರ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಯುವಕರಿಗೆ ಪೊಕ್ಸೊ ಕಾಯ್ದೆಯಡಿ ಏಳು ವರ್ಷಗಳ ಕಠಿಣ ಶಿಕ್ಷೆ ಹಾಗೂ ತಲಾ 25 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ.ಜಿ. ಕುರುವತ್ತಿ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ನಗರದ ಮಂಜುನಾಥ ಬಡಾವಣೆಯ 1ನೆ ತಿರುವಿನ ನಿವಾಸಿಗಳಾದ, ಕೂಲಿ ಕೆಲಸ ಮಾಡುತ್ತಿದ್ದ ಏಳುಮಲೈ(23) ಹಾಗೂ ಪಳನಿ(19) ಶಿಕ್ಷೆಗೊಳಗಾದ ಯುವಕರೆಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಪತ್ನಿಯನ್ನು ಹತ್ಯೆ ಮಾಡಿದ ಆಪಾದನೆ ಮೇರೆಗೆ ಜೈಲು ಶಿಕ್ಷೆಗೊಳಗಾಗಿದ್ದ ಮಂಜುನಾಥ ಬಡಾವಣೆಯ ನಿವಾಸಿ ಗುರುಸ್ವಾಮಿ ಎಂಬವರ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರು ಅದೇ ಬಡಾವಣೆಯಲ್ಲಿರುವ ಅತ್ತೆಯ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದರು. ಇದೇ ಮನೆಯಲ್ಲಿದ್ದ ಅತ್ತೆಯ ಮಗ ಏಳುಮಲೈ ಹಾಗೂ ಮತ್ತೋರ್ವ ಅತ್ತೆಯ ಮಗ ಪಳನಿ ಎಂಬವರು ಈ ಸಹೋದರಿಯರ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿಕೊಂಡು ಬರುತ್ತಿದ್ದರು. ಈ ವಿಷಯ ಯಾರಿಗೂ ತಿಳಿಸದಂತೆ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ತಮ್ಮ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ವಿಷಯವನ್ನು ತಾವು ಓದುತ್ತಿದ್ದ ಶಾಲೆಯ ಶಿಕ್ಷಕಿಯೊಬ್ಬರ ಬಳಿ ಸಹೋದರಿಯರು ಹೇಳಿಕೊಂಡಿದ್ದರು. ಈ ವೇಳೆ ಸಹೋದರಿಯರು ಅತ್ಯಾಚಾರದ ವಿಷಯವನ್ನು ತಿಳಿಸಿದ್ದರು. ಬಳಿಕ ಪೊಲೀಸರ ಗಮನಕ್ಕೆ ತಂದಿದ್ದರು.
ಸಹೋದರಿಯರ ಹೇಳಿಕೆ ದಾಖಲಿಸಿಕೊಂಡ ಮಹಿಳಾ ಠಾಣೆ ಪೊಲೀಸರು, ಆರೋಪಿಗಳ ವಿರುದ್ಧ 2015ರ ಅ.6ರಂದು ಪೊಕ್ಸೊ ಕಾಯ್ದೆ ಸೇರಿದಂತೆ ಐಪಿಸಿಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಇಬ್ಬರನ್ನು ಬಂಧಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆಯಲ್ಲಿ ಆರೋಪಿಗಳ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.







