ರಾಜಾಂಗಣದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ

ಉಡುಪಿ, ಜ.26: ಭಕ್ತಿಯೆಂದರೆ ಗುಲಾಮಗಿರಿ ಎಂದು ಮೂಗು ಮುರಿಯುವ ಬುದ್ಧಿ ಜೀವಿಗಳಿದ್ದಾರೆ. ಆದರೆ ಯಾರೋ ಹಣವಂತರ, ದುಡ್ಡಿನ ದಾಸರಾಗುವುದಕ್ಕಿಂತ ಗುಣಪರಿಪೂರ್ಣನಾದ ಜಗದ್ರಕ್ಷಕ ಭಗವಂತನ ಗುಲಾಮರಾಗುವುದರಲ್ಲಿ ಶ್ರೇಯಸ್ಸಿದೆ ಎಂದು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.
ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಮೈಸೂರಿನ ವಿದ್ವಾಂಸ ರಾಮಚಂದ್ರಾ ಚಾರ್ಯ ಸಂಯೋಜಿಸಿರುವ ನಾಲ್ಕು ದಿನಗಳ 12ನೇ ಪುರಂದರೋತ್ಸವದ ಪ್ರಯುಕ್ತ ಆಯೋಜಿಸಲಾದ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಶ್ರೀವ್ಯಾಸರಾಜರು, ಪುರಂದರದಾಸರು, ಕನಕದಾಸರು, ವಿಜಯದಾಸರು, ಗೋಪಾಲದಾಸರು ಮೊದಲಾದ ದಾಸವರೇಣ್ಯರು ತಮ್ಮ ಜೀವಿತವನ್ನು ಹರಿಭಕ್ತಿ ಪ್ರಸಾರಕ್ಕೆ ಮೀಸಲಿಟ್ಟು ತಮ್ಮ ಕೀರ್ತನೆಗಳಿಂದ ಸಮಾಜಕ್ಕೆ ಭಕ್ತಿಮಾರ್ಗದಲ್ಲಿ ನಡೆಯುವ ದಾರಿಯನ್ನು ತೋರಿಸಿದ್ದಾರೆ.ಇಂಥಹ ಪ್ರಾತಃಸ್ಮರಣೀಯರ ಆರಾಧನೆಯಲ್ಲಿ ಭಾಗವಹಿಸುವುದು ಎಂದರೆ ಸುಯೋಗ ಎಂದರು.
ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥರು, ಶ್ರೀವಿಶ್ವಪ್ರಸನ್ನತೀರ್ಥರು ಬನ್ನಂಜೆ ರಾಘವೇಂದ್ರತೀರ್ಥರು ಅನುಗ್ರಹ ಸಂದೇಶ ನೀಡಿದರು.
ತಿರುಪತಿ ಶ್ರೀವೆಂಕಟೇಶ್ವರ ಸನ್ನಿಧಾನದಿಂದ ವೈಭವದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.







