ಪುರಸಭೆಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ 19 ಸದಸ್ಯರು ಗೈರು!
ಮೂಡುಬಿದಿರೆ , ಜ.26 : 23 ಜನ ಪುರಸಭಾ ಚುನಾಯಿತ ಸದಸ್ಯರಿರುವ ಮೂಡುಬಿದಿರೆ ಪುರಸಭೆಯಲ್ಲಿ ಇಂದು ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬರೇ ನಾಲ್ಕು ಜನ ಸದಸ್ಯರು!
ನೂತನವಾಗಿ ಇತ್ತೀಚಿಗೆ ಆಯ್ಕೆಯಾಗಿದ್ದ ಅಧ್ಯಕ್ಷೆ ಹರಿಣಾಕ್ಷಿ ಹಾಗೂ ಉಪಾಧ್ಯಕ್ಷ ವಿನೋದ್ ಸೆರಾವೋ ಅವರು ಸೇರಿದಂತೆ ಉಳಿದ 20 ಮಂದಿ ಸದಸ್ಯರು ಈ ಅಧಿಕೃತ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದು, ಪುರಸಭೆಯ ಮುಖ್ಯಾಧಿಕಾರಿ ಸೇರಿದಂತೆ ಯಾವುದೇ ಅಧಿಕಾರಿಯು ಸ್ಥಳದಲ್ಲಿ ಹಾಜರಿರಲಿಲ್ಲ.
ಇದರ ಜೊತೆಗೆ 4 ಮಂದಿ ನಾಮನಿರ್ದೇಶಿತ ಸದಸ್ಯರಲ್ಲಿ ಆಲ್ವಿನ್ ಮಿನೇಜಸ್ ಮಾತ್ರವೇ ಹಾಜರಿದ್ದು ಉಳಿದವರು ಗೈರಾಗಿದ್ದರು. ಪುರಸಭೆಯ 34 ಜನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಲ್ಲಿ ಪರಿಸರ ಅಭಯಂತರೆ ಶಿಲ್ಪಾ, ಸಿಬಂದಿಗಳಾದ ಸುಧೀಶ್ ಹೆಗ್ಡೆ, ಯಶಸ್ವಿನಿ ಬಿಟ್ಟರೆ ಉಳಿದವರು ಈ ಕಾರ್ಯಕ್ರಮಕ್ಕೆ ಹಾಜರಿರದೇ ಅಚ್ಚರಿಗೆ ಕಾರಣರಾದರು.
ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಕೊರಗಪ್ಪ, ಬಾಹುಬಲಿ ಪ್ರಸಾದ್, ಸುರೇಶ್ ಕೋಟ್ಯಾನ್, ಪಿ.ಕೆ. ಥೋಮಸ್ ಹಾಜರಿದ್ದ ನಾಲ್ವರು ಸದಸ್ಯರು.
ಮೂಡುಬಿದಿರೆ ಥರ್ಡ್ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸದೇ ಇದ್ದಿದ್ದರೆ ಅಲ್ಲಿ ಸಭಿಕರ ಕೊರತೆ ಎದುರಾಗುತ್ತಿತ್ತು.





