ವಿದೇಶಿ ಗಡ್ಡಧಾರಿಗಳ ಮೇಲೆ ಮಾತ್ರ ಯಾಕೆ ವಿಶೇಷ ಪ್ರೀತಿ ?
ಮೋದಿಗೆ ಉವೈಸಿ ಪ್ರಶ್ನೆ

ಹೈದರಾಬಾದ್, ಜ.27: ಪ್ರಧಾನಿ ನರೇಂದ್ರ ಮೋದಿಗೆ ವಿದೇಶಿ ಗಡ್ಡಧಾರಿಗಳ ಮೇಲೆ ಏಕೆ ವಿಶೇಷ ಪ್ರೀತಿ ಎಂದು ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಪ್ರಶ್ನಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಯುಎಇ ಯುವರಾಜ ಆಗಮಿಸಿದಾಗ ಅವರನ್ನು ಬಾಚಿ ತಬ್ಬಿಕೊಳ್ಳುವ ರೀತಿಯಲ್ಲಿ ಕೈಚಾಚಿದ ಪ್ರಧಾನಿ ಕ್ರಮವನ್ನು ಉವೈಸಿ ಲೇವಡಿ ಮಾಡಿದ್ದಾರೆ.
ಅಲೀಘಢದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, "ಖಂಡಿತವಾಗಿಯೂ ನಮ್ಮ ಅತಿಥಿಗಳನ್ನು ಗೌರವದಿಂದ ಕಾಣಬೇಕು. ರಾಜಕುಮಾರನಿಗೆ ಯಥೋಚಿತ ಸ್ವಾಗತ ನೀಡಲೇಬೇಕು. ಆದರೆ ಮೋದಿ ಇಂದು ಬೆಳಗ್ಗೆ ಯೋಗ ಮಾಡಿರಲಿಲ್ಲ ಎನಿಸುವಂತಿತ್ತು. ಅವರು ಅತಿಥಿಯನ್ನು ಬರಮಾಡಿಕೊಳ್ಳುವಾಗ ಎರಡೂ ಕೈಗಳನ್ನು ಚಾಚಿ ಯೋಗ ಮಾಡುವಂತಿತ್ತು" ಎಂದು ಅಣಕಿಸಿದ್ದಾರೆ.
ವಿದೇಶಿ ದಾಡಿವಾಲಾಗಳ ಬಗ್ಗೆ ಮೋದಿಗೆ ಅಷ್ಟೊಂದು ಪ್ರೀತಿ ಇದ್ದರೆ ಭಾರತೀಯ ದಾಡಿವಾಲಾಗಳ ಬಗ್ಗೆ ಅದರ ಒಂದು ಪಾಲು ಪ್ರೀತಿಯೂ ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ಹೀಗೆ ಪ್ರಶ್ನಿಸುವಾಗಲೂ ಎಚ್ಚರ ವಹಿಸಿದ ಉವೈಸಿ, ಧರ್ಮದ ಆಧಾರದಲ್ಲಿ ಮತ ಯಾಚನೆ ಮಾಡುವಂತಿಲ್ಲ ಎಂಬ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮುಸ್ಲಿಂ ಎಂಬ ಪದವನ್ನು ಅವರು ಎಲ್ಲೂ ಬಳಸಲಿಲ್ಲ. ಮೋದಿಯವರ ನೋಟು ರದ್ದತಿ ನಿರ್ಧಾರವನ್ನೂ ಎಂಐಎಂ ಮುಖ್ಯಸ್ಥ ಕಟುವಾಗಿ ಟೀಕಿಸಿದರು.







