ಸೇನಾ ಶಿಬಿರದ ಮೇಲೆ ಹಿಮಪಾತ: ಹಾಸನದ ಯೋಧ ಹುತಾತ್ಮ, ಬೆಳಗಾವಿಯ ಯೋಧ ಪಾರು

ಶ್ರೀನಗರ, ಜ.27: ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಕ್ಯಾಂಪ್ ನ ಮೇಲೆ ಭಾರಿ ಹಿಮಪಾತ ಸಂಭವಿಸಿದ ಪರಿಣಾಮವಾಗಿ ಹಾಸನದ ಯೋಧ ಸಂದೀಪ್ (28) ಪಾಣ ಕಳೆದುಕೊಂಡಿದ್ದಾರೆ. ಇದೇ ವೇಳೆ ಬೆಳಗಾವಿ ಯೋಧ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಂಡಿಪೋರಾ ಜಿಲ್ಲೆಯ ಗುರೇಜ್ ಸೆಕ್ಟರ್ ನಲ್ಲಿ ಜ,.25ರಂದು ಸಂಭವಿಸಿದ ಭಾರಿ ಹಿಮಪಾತದಿಂದಾಗಿ ಹಲವು ಯೋಧರು ನಾಪತ್ತೆಯಾಗಿದ್ದಾರೆ . ಈ ಪೈಕಿ ಹದಿನಾಲ್ಕು ಮಂದಿ ಹುತಾತ್ಮರಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಬೆಳಗಾವಿ ಯೋಧ ಮೇಜರ್ ಶ್ರೀಹರಿ ಕೂಗಜಿ ಸೇರಿದಂತೆ ಏಳು ಯೋಧರನ್ನು ರಕ್ಷಿಸಲಾಗಿದೆ ಮತ್ತು ನಾಲ್ವರು ಯೋಧರ ಮೃತದೇಹವನ್ನು ಹೊರ ತೆಗೆಯಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹುತಾತ್ಮರಾಗಿರುವ ಯೋಧ ಸಂದೀಪ್ ಅವರು ಹಾಸನದ ಶಾಂತಿ ಗ್ರಾಮ ಹೋಬಳಿಯ ದೇವಿಹಳ್ಳಿ ನಿವಾಸಿ. ಅವರಿಗೆ ಫೆ.14ರಂದು ವಿವಾಹ ನಿಗದಿಯಾಗಿತ್ತು.
ಕಾಶ್ಮೀರದ ಸೋನಾಮಾರ್ಗ್ ಸಮೀಪದ ಸೇನಾ ಕ್ಯಾಂಪ್ ಬಳಿ ಸಂಭವಿಸಿದ ಹಿಮಪಾತದಿಂದಾಗಿ ಸೇನಾಧಿಕಾರಿ ಮೇಜರ್ ಅಮಿತ್ ಸಾಗರ್ ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದರು. ಇತರ ನಾಲ್ಕು ಮಂದಿ ಯೋಧರನ್ನು ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿತ್ತು. ಇದರ ಬೆನ್ನಲ್ಲೇ ಮತ್ತೆ ಹಿಮಪಾತವಾಗಿ ಹಲವು ಸೈನಿಕರು ನಾಪತ್ತೆಯಾಗಿದ್ದಾರೆ.





