ತನ್ನ ಜೀವ ಪಣಕ್ಕಿಟ್ಟು ಜನರನ್ನು ಕಾಪಾಡಿದ ಪೈಲಟ್ ಗೆ ವಾಯುಸೇನೆಯ ಗೌರವ

ಹೊಸದಿಲ್ಲಿ, ಜ.27: ಯುದ್ಧ ವಿಮಾನವೊಂದರ ಪೈಲಟ್ ಅಪಾಯಕಾರಿ ಸಂದರ್ಭಗಳನ್ನು ಆಗಾಗ ಎದುರಿಸುತ್ತಿರುತ್ತಾರೆ. ಆದರೆ ಇಂತಹ ಅಪಾಯಕಾರಿ ಸಂದರ್ಭವೊಂದರಲ್ಲಿ ಪೈಲಟ್ ಒಬ್ಬರು ತನ್ನ ಜೀವದ ಹಂಗನ್ನು ತೊರೆದು ವಿಮಾನ ನೆಲಕ್ಕಪ್ಪಳಿಸದಂತೆ ತಡೆದು ಕೆಳಗೆ ಇರುವ ಜನರನ್ನು ರಕ್ಷಿಸಿದ್ದಾರೆ. ಅವರೇ ಸ್ಕ್ವಾಡ್ರನ್ ಲೀಡರ್ ರಿಜುಲ್ ಶರ್ಮ. ಅವರ ಈ ಸಾಹಸ ಕಾರ್ಯಕ್ಕೆ ಅವರಿಗೆ ಗಣತಂತ್ರ ದಿನದಂದು ವಾಯು ಸೇನೆಯ ಮೆಡಲ್ ಆಫ್ ಗ್ಯಾಲಂಟ್ರಿ ನೀಡಿ ಗೌರವಿಸಲಾಗಿದೆ.
ಭಾರತೀಯ ವಾಯು ಸೇನೆಯ ಸ್ಕ್ವಾಡ್ರನ್ ಲೀಡರ್ ರಿಜುಲ್ ಶರ್ಮ ತಮ್ಮ ಮಿಗ್ 29 ಯುದ್ಧ ವಿಮಾನದಲ್ಲಿ ಸೂಪರ್ ಸಾನಿಕ್ ವೇಗ ಪರೀಕ್ಷೆಯನ್ನು ಮಾಡಲು ವಿಮಾನವನ್ನು ಭೂಮಟ್ಟದಿಂದ 10 ಕಿ.ಮೀ. ಎತ್ತರದಲ್ಲಿ ಹಾರಿಸುತ್ತಿದ್ದಾಗ ಹಾಗೂ ವಾಯುನೆಲೆಯಿಂದ 110 ಕಿ.ಮೀ. ದೂರದಲ್ಲಿದ್ದಾಗ ಅವರ ವಿಮಾನ ಗಂಟೆಗೆ 1,200ರಿಂದ 1,300 ಕಿ.ಮೀ. ವೇಗದಲ್ಲಿ ಹಾರುತ್ತಿತ್ತು. ಆದರೆ ಆ ಕ್ಷಣದಲ್ಲಿ ವಿಮಾನದ ಕ್ಯಾನೊಪಿ ಪರ್ಸ್ಪೆಕ್ಸ್ ತುಂಡಾಗಿ ಅವರ ಭುಜಕ್ಕೆ ತಾಗಿ ಗಾಯಗೊಳಿಸಿತ್ತು. ಇದರಿಂದ ವಿಮಾನದ ಕಾಕ್ ಪಿಟ್ ನಲ್ಲಿ ಡಿಕಂಪ್ರೆಶನ್ ಉಂಟಾಗಿ ಅದರೊಳಗಿನ ತಾಪಮಾನ ಮೈನಸ್ 28ರಷ್ಟಾಗಿತ್ತು. ಇಂತಹ ಸಂದರ್ಭದಲ್ಲಿ ಯಾರಾದರೂ ಅಸೌಖ್ಯಗೊಳಗಾಗಿ ಸ್ಮತಿ ತಪ್ಪಿ ಬೀಳುವ ಸಾಧ್ಯತೆಯೂ ಇದೆ. ತಮ್ಮ ಜೀವ ಉಳಿಸಬೇಕಿದ್ದರೆ ರಿಜುಲ್ ಶರ್ಮ ಅವರು ಕೆಲವೇ ಸೆಕೆಂಡುಗಳಲ್ಲಿ ಆ ವಿಮಾನದಿಂದ ಹೊರ ಬರಬೇಕಿತ್ತು. ಆದರೆ ಅವರು ಹಾಗೆ ಮಾಡಿದ್ದರೆ ವಿಮಾನ ನೆಲಕ್ಕಪ್ಪಳಿಸಿ ಹಲವರ ಪ್ರಾಣ ಹಾನಿಯಾಗುತ್ತಿತ್ತು.
ಆದರೆ ಅವರು ಹಾಗೆ ಮಾಡದೆ ವಿಮಾನವನ್ನು ಸುರಕ್ಷಿತವಾಗಿ ಇಳಿಸುವ ನಿರ್ಧಾರಕ್ಕೆ ಬಂದಿದ್ದರು. ಸ್ವಲ್ಪ ಹೊತ್ತಿನಲ್ಲೇ ವಿಮಾನ 3 ಕಿ.ಮೀ. ಎತ್ತರದಲ್ಲಿ ಹಾರಾಡುತ್ತಿತ್ತು. ಅದರ ವೇಗ ಕೂಡ ಕಡಿಮೆಗೊಳಿಸಿದ ಅವರು ವಿಮಾನವನ್ನು ಜನನಿಬಿಡ ಪ್ರದೇಶಗಳಿಂದ ದೂರವಾಗಿ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಸುರಕ್ಷಿತವಾಗಿ ಇಳಿಸಿದ್ದರು.





