ಗಂಡನ ಜೊತೆ ಜಗಳ ; ಮಗುವನ್ನು ಹೊರಕ್ಕೆ ಎಸೆದ ಮಹಾತಾಯಿ..!

ಹೊಸದಿಲ್ಲಿ, ಜ.27: ಮಹಿಳೆಯೊಬ್ಬಳು ತನ್ನ ಗಂಡನೊಂದಿಗೆ ಜಗಳವಾಡಿ ಅಲ್ಲೇ ನಿದ್ರಿಸುತ್ತಿದ್ದ ಎರಡರ ಹರೆಯದ ಮಗನನ್ನು ಮೆಟ್ಟಿಲಿನಿಂದ ಕೆಳಕ್ಕೆ ಎಸೆದ ಘಟನೆ ದಿಲ್ಲಿಯಲ್ಲಿ ನಡೆದಿದೆ.
ಸೋನು ಗುಪ್ತಾ ಮಗನನ್ನು ಮೆಟ್ಟಿನಿಂದ ಕೆಳಕ್ಕೆ ಎಸೆದ ಮಹಾತಾಯಿ. ಪರಿಣಾಮವಾಗಿ ಗಂಭೀರ ಗಾಯಗೊಂಡಿರುವ ಮಗು ಅಂಶು ಗುಪ್ತಾನನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ ತನ್ನ ಮಗನನ್ನು ಹೊರಕ್ಕೆ ಎಸೆದು ಹತ್ಯೆಗೆ ಯತ್ನಿಸಿರುವುದಾಗಿ ಆಕೆಯ ವಿರುದ್ಧ ಪತಿ ನಿತಿನ್ ಗುಪ್ತಾ ಪೊಲೀಸರಿಗೆ ದೂರು ನೀಡಿದ್ದಾರೆ.
ಐದು ವರ್ಷಗಳ ಹಿಂದೆ ಸೋನು ಮತ್ತು ನಿತಿನ್ ಗುಪ್ತಾ ವಿವಾಹ ನಡೆದಿತ್ತು. ಇತ್ತೀಚೆಗೆ ಇವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆಸ್ತಿಯ ವಿಚಾರ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಜ.24ರಂದು ಸೋನು ಮತ್ತು ನಿತಿನ್ ನಡುವೆ ಜಗಳ ನಡೆದಿತ್ತು. ಸಿಟ್ಟಿನಿಂದ ಹಾಸಿಗೆಯಲ್ಲಿ ಮಲಗಿದ್ದ ಮಗುವನ್ನು ಎತ್ತಿದ ಸೋನು ಹೊರಕ್ಕೆ ಕೊಂಡೊಯ್ದು ಮೆಟ್ಟಿಲುಗಳ ಮೂಲಕ ಎರಡನೆ ಅಂತಸ್ತಿನಿಂದ ಮೊದಲ ಅಂತಸ್ತಿನ ಕೆಳಕ್ಕೆ ಎಸೆದಿದ್ದಾಳೆ. ಮಗುವಿನ ತಲೆಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಸಿಸಿ ಟಿವಿಯಲ್ಲಿ ಮಹಾತಾಯಿಯ ಜಗಳ, ಮಗನನ್ನು ಹೊರಕ್ಕೆ ಎಸೆದ ಕೃತ್ಯದ ದೃಶ್ಯದ ಕ್ಷಣಗಳು ದಾಖಲಾಗಿವೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.





