ರಾಜ್ಯ ಸಶಸ್ತ್ರ ಮೀಸಲು ಪಡೆಗೆ 102 ಬಸ್ ಸೇರ್ಪಡೆ: ಸಿಎಂ ಹಸಿರು ನಿಶಾನೆ

ಬೆಂಗಳೂರು, ಜ.27: ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆಗೆ ಹೊಸದಾಗಿ ಸೇರ್ಪಡೆಯಾಗಿರುವ, ಆಧುನಿಕ ತಂತ್ರಜ್ಞಾನ ಸೌಲಭ್ಯ ಹೊಂದಿರುವ 102 ಬಸ್ ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸೌಧದ ಮುಂಭಾಗ ಇಂದು ಹಸಿರು ನಿಶಾನೆ ತೋರಿಸಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ಪೊಲೀಸ್ ಇಲಾಖೆ ದಕ್ಷತೆಯಿಂದ ಕೆಲಸ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸುಮಾರು 300 ವಾಹನಗಳನ್ನು ಗಸ್ತು ತಿರುಗುವ ಪೊಲೀಸರಿಗೆ ನೀಡಲಾಗಿದೆ. ಹೆದ್ದಾರಿ ಗಸ್ತಿಗೆ 100 ಇನ್ನೋವಾ ವಾಹನಗಳನ್ನು ಕೊಟ್ಟಿದೆ. ಅಪಘಾತ ಸಂಭವಿಸಿದಾಗ ಗಾಯಾಳುಗಳಿಗೆ ನೆರವಾಗಲು, ಅಪರಾಧಗಳನ್ನು ನಿಯಂತ್ರಿಸಲು ವೇಗ ಹೊಂದಿರುವ ವಾಹನಗಳ ಅಗತ್ಯವಿದೆ ಎಂಬುದನ್ನು ಮನಗಂಡು ಈ ಕ್ರಮ ಕೈಗೊಳ್ಳಲಾಗಿದೆ. ಇನ್ನೂ 200 ವಾಹನಗಳನ್ನು ಸದ್ಯವೇ ಒದಗಿಸಲಾಗುವುದು ಎಂದರು.
ಕೆಎಸ್‌ಆರ್‌ಪಿ ಸಿಬ್ಬಂದಿ ದೂರದ ಊರುಗಳಿಗೆ ಸಂಚರಿಸುತ್ತಾರೆ. ಅವರಿಗೆ ಈಗ ಒದಗಿಸಿರುವ ವಾಹನಗಳಿಂದ ಅನುಕೂಲವಾಗುತ್ತದೆ. ಮಹಿಳಾ ಪೊಲೀಸರಿಗೆ ಶೌಚಾಲಯ ಸೌಲಭ್ಯ ಹೊಂದಿರುವ ವಾಹನಗಳನ್ನು ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು.
ಜನರ ನಿರೀಕ್ಷೆಗೆ ತಕ್ಕಂತೆ ಪೊಲೀಸ್ ಇಲಾಖೆ ಕೆಲಸ ಮಾಡಬೇಕು. ಶಾಂತಿ, ಸುವ್ಯವಸ್ಥೆ ಕಾಪಾಡಬೇಕು. ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗದಿದ್ದರೂ ಅಪರಾಧಗಳನ್ನು ನಿಯಂತ್ರಿಸಿ, ಕಾನೂನು ಬಗ್ಗೆ ಜನರಲ್ಲಿ ಗೌರವ ಬರುವಂತ ಕೆಲಸವನ್ನು ಪೊಲೀಸರು ಮಾಡಬೇಕು ಎಂದರು.
ಗೃಹಸಚಿವ ಡಾ.ಜಿ.ಪರಮೇಶ್ವರ್, ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್, ಗೃಹಸಚಿವರ ಸಲಹೆಗಾರ ಕೆಂಪಯ್ಯ ಉಪಸ್ಥಿತರಿದ್ದರು.







