"ಕೋಮು ಗಲಭೆ ಸೃಷ್ಟಿಸಲು ಆರೆಸ್ಸೆಸ್ ನನ್ನನ್ನು ಬಳಸಿತು"
ಬಾಯಿಬಿಟ್ಟ ಮಾಜಿ ಸದಸ್ಯ

ತಿರುವನಂತಪುರ,ಜ.27: ತಾನು ಸಿಪಿಎಂ ಏಜಂಟ್ ಎಂದು ಆರೋಪಿಸಿ ಆರೆಸ್ಸೆಸ್ ಕಾರ್ಯಕರ್ತರು ತನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಸಂಘ ಪರಿವಾರದ ಮಾಜಿ ಕಾರ್ಯಕರ್ತನೋರ್ವ ಆರೋಪಿಸಿದ್ದಾನೆ. ಈತನ ಹೇಳಿಕೆಗಳು ಕೇರಳದಲ್ಲಿ ಕೋಲಾಹಲ ವನ್ನೇ ಸೃಷ್ಟಿಸಿವೆ.
ತಿರುವನಂತಪುರದ ಕಾರಾಕುಳಂ ಪಂಚಾಯತ್‌ವ್ಯಾಪ್ತಿಯ ಆರೆಸ್ಸೆಸ್ ಕಾರ್ಯಕರ್ತ ಎಸ್.ವಿಷ್ಣು (25) ತನ್ನ ಏಳನೆಯ ವಯಸ್ಸಿನಿಂದಲೇ ಆರೆಸೆಸ್ ಶಾಖೆಗೆ ಹೋಗುತ್ತಿದ್ದ. ಆರೆಸ್ಸೆಸ್ ಕಾರ್ಯಕರ್ತರು 38 ದಿನಗಳ ಕಾಲ ತನ್ನನ್ನು ಅಕ್ರಮ ಬಂಧನದಲ್ಲಿರಿಸಿದ್ದರು ಮತ್ತು ಸಿಪಿಎಂ ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಪಿ.ಜಯರಾಮ್ ಅವರು ತನ್ನ ಸಾವಿಗೆ ಕಾರಣ ಎಂದು ಆತ್ಮಹತ್ಯಾ ಪತ್ರವನ್ನು ಬರೆಯುವಂತೆ ತನ್ನನ್ನು ಬಲವಂತಗೊಳಿಸಿದ್ದರು ಎಂದು ಆತ ಆರೋಪಿಸಿದ್ದಾನೆ. ವಿಷ್ಣು ಸದ್ಯಇಲ್ಲಿಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಆರೆಸ್ಸೆಸ್‌ನ ಅಕ್ರಮ ಚಟುವಟಿಕೆಗಳನ್ನು ತಾನು ಪ್ರಶ್ನಿಸಿದ್ದೆ. ಕಳೆದ ವರ್ಷ ಕೋಮು ಗಲಭೆಯನ್ನು ಸೃಷ್ಟಿಸಲು ಅವರು ಪೆಂಟೆಕೋಸ್ಟ್ ಚರ್ಚ್‌ನ ಮೇಲೆ ಕಲ್ಲುಗಳನ್ನೆಸೆದಿದ್ದರು. ಆ ಪ್ರಕರಣದಲ್ಲಿ ತಾನು ಆರೋಪಿಯಾಗಿದ್ದೆ. ಆರೆಸ್ಸೆಸ್‌ನ ಆಣತಿಯ ಮೇರೆಗೆ ತಾನು ಆ ಕೆಲಸವನ್ನು ಮಾಡಿದ್ದೆ. ರಮಝಾನ್ ಸಂದರ್ಭ ಕೋಣಗಳನ್ನು ಸಾಗಿಸುತ್ತಿದ್ದ ವಾಹನವನ್ನು ಅಡ್ಡಹಾಕಿದ್ದ ಪ್ರಕರಣದಲಿಯೂ ತಾನು ಆರೋಪಿಯಾಗಿದ್ದೆ. ಇವೆಲ್ಲವನ್ನೂ ಅವರ ಆಣತಿಯ ಮೇರೆಗೇ ಮಾಡಿದ್ದೆ. ನಂತರ ತಾನು ಇದನ್ನು ಪ್ರಶ್ನಿಸಿದಾಗಿನಿಂದ ಅವರು ತನ್ನ ಬಗ್ಗೆ ಮುನಿಸಿಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಿಷ್ಣು ಹೇಳಿದ್ದಾನೆ.
ತಾನೂ ಸೇರಿದಂತೆ ಕೆಲವು ಯುವಕರು ಆರೆಸ್ಸೆಸ್‌ನ್ನು ತೊರೆದಿದ್ದೇವೆ ಮತ್ತು 30 ಸದಸ್ಯರ ಗುಂಪೊಂದನ್ನು ಮಾಡಿಕೊಂಡು ಆರೆಸ್ಸೆಸ್ ಪ್ರಾಬಲ್ಯದ ಪ್ರದೇಶದಲ್ಲಿ ಸಮಾಂತರ ಸಂಘಟನೆಯಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಆತ ತಿಳಿಸಿದ.
ಆಗಿನಿಂದ ತಮ್ಮ ಗುಂಪಿಗೆ ಬೆದರಿಕೆಗಳು ಬರುತ್ತಿವೆ. ಸಿಪಿಎಂ ಕಾರ್ಯಕರ್ತ ಕಣ್ಣೂರು ಧನರಾಜ್ ಕೊಲೆ ಪ್ರಕರಣದ ಆರೋಪಿಯಾದ ಆರೆಸ್ಸೆಸ್ ಸದಸ್ಯ ಕಣ್ಣನ್ ತಿರುವನಂತಪುರಕ್ಕೆ ಬಂದ ನಂತರ ಸಂಕಷ್ಟಗಳು ಆರಂಭವಾದವು. ಆತ ಪ್ರದೇಶದಲ್ಲಿನ ಬಿಜೆಪಿ ಧ್ವಜಗಳನ್ನು ನಾಶ ಮಾಡಿ ಅದರ ಹೊಣೆಯನ್ನು ಸಿಪಿಎಂ ಮೇಲೆ ಹೊರಿಸುವ ಮೂಲಕ ಪ್ರದೇಶದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸಿದ್ದ. ತಮ್ಮ ಗುಂಪು ಇದನ್ನು ಪ್ರಶ್ನಿಸಿತ್ತಲ್ಲದೆ, ಆತನ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನೂ ನೀಡಿತ್ತು. ಆ ಬಳಿಕ ಆರೆಸ್ಸೆಸ್ ಕಾರ್ಯಕರ್ತರು ತನ್ನ ಹತ್ಯೆಗೆ ಸಂಚು ರೂಪಿಸಿದ್ದರೆಂದು ಆರೋಪಿಸಿರುವ ವಿಷ್ಣು, ಬಿಜೆಪಿ ನಾಯಕ ಸಾಜು ಸೇರಿದಂತೆ ಸಂಘ ಪರಿವಾರದ ಹಲವಾರು ನಾಯಕರು ತನ್ನ ಮೇಲೆ ಹಲ್ಲೆ ನಡೆಸಿ ಬಳಿಕ ನೆಯ್ಯಂಟಿಕರ ಎಂಬಲ್ಲಿಗೆ ತನ್ನನ್ನು ಒಯ್ದಿದ್ದರು. ಅಲ್ಲಿ ಕೆಲವು ನಾಯಕರು ಪಿ.ಜಯರಾಮನ್ ಜೊತೆ ಹೇಗೆ ಸಂಪರ್ಕವುಂಟಾಗಿತ್ತು ಎಂದು ಪ್ರಶ್ನಿಸಿದ್ದರು. ಮ್ಯಾಗಝಿನ್‌ವೊಂದನ್ನು ಸಿದ್ಧಪಡಿಸಲು ತಾನು ಜಯರಾಮನ್ ಸೇರಿದಂತೆ ಹಲವಾರು ರಾಜಕೀಯ ನಾಯಕರನ್ನು ಭೇಟಿಯಾಗಿದ್ದ್ದೆ.ಆದರೆ ಜಯರಾಮನ್ ಜೊತೆ ತನಗೆ ಬೇರೆ ಯಾವುದೇ ಸಂಪರ್ಕವಿರಲಿಲ್ಲ ಎಂದು ಆತ ತಿಳಿಸಿದ.
ಆರೆಸ್ಸೆಸ್ ಕಾರ್ಯಕರ್ತರು ತನ್ನನ್ನು ಬೇರೆ ಬೇರೆ ಊರುಗಳಿಗೆ ಕರೆದೊಯ್ದು ಅಕ್ರಮ ಬಂಧನದಲ್ಲಿರಿಸಿದ್ದರಲ್ಲದೆ ಕೊಲ್ಲುವ ಬೆದರಿಕೆಯನ್ನೂ ಒಡ್ಡಿದ್ದರು. ಒಮ್ಮೆಯಂತೂ 86 ಗಂಟೆಗಳ ಕಾಲ ಆಹಾರ-ನೀರು ನೀಡದೆ, ನಿದ್ರೆ ಮಾಡಲೂ ಬಿಡದೆ ಚಿತ್ರಹಿಂಸೆ ನೀಡಿದ್ದರು ಎಂದ ವಿಷ್ಣು, ಜ.22ರಂದು ಅವರೆಲ್ಲ ವಲ್ಲಿಕಾವು ಬಳಿ ಅಮೃತಾನಂದ ಮಯಿಯವರನ್ನು ಭೇಟಿಯಾಗಲು ತೆರಳಿದ್ದಾಗ ತಪ್ಪಿಸಿಕೊಳ್ಳುವಲ್ಲಿ ಸಫನಾಗಿದ್ದೇನೆ. ಅವರು ತನ್ನನ್ನು ಕೊಲ್ಲಲಿದ್ದಾರೆ ಎನ್ನುವುದು ತನಗೆ ಗೊತ್ತಾಗಿತ್ತು. ತನ್ನನ್ನು ಕಣ್ಣೂರಿನ ಆರೆಸ್ಸೆಸ್ ಕಾರ್ಯಕರ್ತರಿಗೆ ಒಪ್ಪಿಸುವುದಾಗಿ ಅವರು ಹೇಳುತ್ತಿದ್ದರು. ಅಂತೂ ಅವರ ಹಿಡಿತದಿಂದ ಜೀವಸಹಿತ ಪಾರಾಗಿದ್ದೇನೆ ಎಂದು ನಿಟ್ಟುಸಿರೆಳೆದ ಆತ, 18 ವರ್ಷಗಳ ಕಾಲ ಆರೆಸ್ಸೆಸ್‌ಗಾಗಿ ಜೀವ ತೇಯ್ದಿದ್ದ ತನಗೆ ಅದು ಕೊಟ್ಟ ಉಡುಗೊರೆ ತನಗೆ ಆಘಾತವನ್ನುಂಟು ಮಾಡಿದೆ ಎಂದು ಹೇಳಿದ.







