ಪೆಲೆಟ್ ನಿಂದ ಕುರುಡರಾದರೂ ಪರೀಕ್ಷೆಯಲ್ಲಿ ಬೆಳಗಿದ ಕಶ್ಮೀರಿ ಪೋರರು

ಶ್ರೀನಗರ, ಜ.27: ಬುರ್ಹಾನ್ ವಾನಿಯ ಹತ್ಯೆಯ ನಂತರ ಕಾಶ್ಮೀರ ಕಣಿವೆಯಲ್ಲಿ ತಿಂಗಳುಗಳ ಕಾಲ ನಡೆದ ಹಿಂಸಾಚಾರದ ಸಂದರ್ಭ ಸುರಕ್ಷಾ ಪಡೆಗಳು ನಡೆಸಿದ ಪೆಲೆಟ್ ಗುಂಡಿನ ದಾಳಿಗಳಲ್ಲಿ ಅನೇಕ ಅಮಾಯಕರು ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ಅವರಲ್ಲಿ ಹಲವು ವಿದ್ಯಾರ್ಥಿಗಳೂ ಸೇರಿದ್ದಾರೆ. ಇತ್ತೀಚೆಗಷ್ಟೇ ಘೋಷಿತವಾದ 12ನೆ ತರಗತಿಯ ಸ್ಟೇಟ್ ಬೋರ್ಡ್ ಪರೀಕ್ಷೆಯಲ್ಲಿ ಪೆಲೆಟ್ ದಾಳಿಯಿಂದಾಗಿ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಹಲವು ವಿದ್ಯಾರ್ಥಿಗಳು ಧೃತಿಗೆಡದೆ ಪರೀಕ್ಷೆಗೆ ಹಾಜರಾಗಿ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾರೆ.
ಅವರಲ್ಲೊಬ್ಬ 18 ವರ್ಷದ ಸುಹೈಲ್ ಗುಲ್ ಮಿರ್. ಪುಲ್ವಾಮ ಜಿಲ್ಲೆಯ ರೊಹ್ಮೂ ಗ್ರಾಮದ ನಿವಾಸಿಯಾದ ಜುಲೈ 8ರಂದು ಟ್ಯೂಷನ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಆತ ಸುರಕ್ಷಾ ಪಡೆಗಳು ಹಾಗೂ ಪ್ರತಿಭಟನಾಕಾರರ ನಡುವೆ ಸಿಲುಕಿದ್ದನು. ಆತನ ಎಡಗಣ್ಣಿಗೆ ಪೆಲೆಟ್ ನುಗ್ಗಿತ್ತು. ಹಲವಾರು ಶಸ್ತ್ರಚಿಕಿತ್ಸೆ ಹಾಗೂ ಚಿಕಿತ್ಸೆಯ ನಂತರವೂ ಆತನ ಒಂದು ಕಣ್ಣಿನ ದೃಷ್ಟಿ ಮರಳಲೇ ಇಲ್ಲ. ಆದರೂ ನವೆಂಬರ್ ತಿಂಗಳಲ್ಲಿ ನಡೆದ 12ನೆ ತರಗತಿ ಪರೀಕ್ಷೆಯಲ್ಲಿ ಆತ ಕಲಾ ವಿಭಾಗದಲ್ಲಿ ಶೇ.75 ಅಂಕಗಳನ್ನು ಪಡೆದು ಭೇಷ್ ಎನಿಸಿಕೊಂಡಿದ್ದಾನೆ.
ಸುಹೈಲ್ ನಂತೆಯೇ ಪ್ಯಾಂಪೋರ್ ನಗರದ 16 ವರ್ಷದ ತಬಿಶ್ ರಫೀಖ್ ಭಟ್ ಎಂಬವನ ಎಡಗಣ್ಣು ಕೂಡ ಪೆಲೆಟ್ ದಾಳಿಯಿಂದಾಗಿ ಕುರಡಾಗಿದೆ. ಆತನಿಗೆ ದೃಷ್ಟಿ ಮರಳಿ ಬರುವ ಸಾಧ್ಯತೆಯಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹತ್ತನೆ ತರಗತಿ ಪರೀಕ್ಷೆಯಲ್ಲಿ ಆತನಿಗೆ 7 ಸಿಎಜಿಪಿ ಅಂಕಗಳು ದೊರೆತಿವೆ. ಇನ್ನೊಬ್ಬ ಬಾಲಕ 16 ವರ್ಷದ ಸುಹೈಬ್ ನಝೀರ್ ಬಲಗಣ್ಣು ಪೆಲೆಟ್ ನಿಂದಾಗಿ ಬಾಧಿತವಾಗಿದೆ. ಆತ ಕೂಡ ಹತ್ತನೆ ತರಗತಿ ಪರೀಕ್ಷೆಯಲ್ಲಿ 7.2 ಸಿಎಜಿಪಿ ಅಂಕಗಳು ದೊರೆತಿವೆ.
ತಮ್ಮ ನೋವಿನ ನಡುವೆಯೂ ಈ ಬಾಲಕರು ತಮ್ಮ ಶಿಕ್ಷಣ ಮುಂದುವರಿಸಲು ತೋರಿಸಿದ ಉತ್ಸಾಹ ಹಲವರಿಗೆ ಸ್ಫೂರ್ತಿಯಾಗಿದೆ.







