ಅಮರಿಂದರ್ ಸಿಂಗ್ ಕಾಂಗ್ರೆಸ್‌ನ ಪಂಜಾಬ್ ಸಿ.ಎಂ. ಅಭ್ಯರ್ಥಿ: ರಾಹುಲ್

ಮಜಿಥಾ,ಜ.27: ಪಂಜಾಬ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕ್ಯಾ.ಅಮರಿಂದರ್ ಸಿಂಗ್ ಅವರು ನೂತನ ಮುಖ್ಯಮಂತ್ರಿ ಯಾಗಲಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಲ್ಲಿ ಘೋಷಿಸಿದರು. ರಾಹುಲ್ ತನ್ನ ಮೂರು ದಿನಗಳ ರಾಜ್ಯ ಪ್ರವಾಸವನ್ನು ಶುಕ್ರವಾರದಿಂದ ಆರಂಭಿಸಿದ್ದು, ಬಹಿರಂಗ ಸಭೆಯಲ್ಲಿ ಮಾತನಾಡುವ ಮೂಲಕ ಚುನಾವಣಾ ಪ್ರಚಾರಕ್ಕೆ ಇಲ್ಲಿಂದಲೇ ನಾಂದಿ ಹಾಡಿದ ಅವರು ಅಕಾಲಿದಳ-ಬಿಜೆಪಿ ಸರಕಾರದ ಚುಕ್ಕಾಣಿ ಹಿಡಿದಿರುವ ಬಾದಲ್‌ಗಳನ್ನು ತನ್ನ ವಾಗ್ದಾಳಿಯ ಗುರಿಯಾಗಿಸಿಕೊಂಡಿದ್ದಾರೆ. ಪಂಜಾಬ್ ವಿಧಾನಸಭೆಗೆ ಫೆ.4ರಂದು ಮತದಾನ ನಡೆಯಲಿದೆ.
ರಾಜ್ಯದಲ್ಲಿಯ ಪ್ರತಿಯೊಂದಕ್ಕೂ ಬಾದಲ್ ಕುಟುಂಬಕ್ಕೆ ಪಾಲು ಹೋಗುತ್ತಿದೆ. ಪಂಜಾಬ್ ‘ಬಾದಲ್ ತೆರಿಗೆ ’ಯನ್ನು ಪಾವತಿಸುತ್ತಿದೆ ಎಂದು ರಾಹುಲ್ ಆರೋಪಿಸಿದರು. ಮುಖ್ಯಮಂತ್ರಿ ಪ್ರಕಾಶ ಸಿಂಗ್ ಬಾದಲ್ ಅವರ ಕ್ಷೇತ್ರ ಲಂಬಿ ಮತ್ತು ಅವರ ಪುತ್ರ ಹಾಗೂ ಉಪ ಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಅವರ ಕ್ಷೇತ್ರ ಜಲಾಲಾಬಾದ್ ಸೇರಿದಂತೆ ಎಲ್ಲ ಬಾದಲ್ ಕೋಟೆಗಳಿಗೆ ರಾಹುಲ್ ಭೇಟಿ ನೀಡಲಿದ್ದಾರೆ. ಲಾಂಬಿಯಲ್ಲಿ ಪ್ರಕಾಶ ಸಿಂಗ್ ವಿರುದ್ಧ ಅಮರಿಂದರ್ ಸಿಂಗ್ ಅವರು ಕಣಕ್ಕಿಳಿದಿದ್ದಾರೆ.
ಪಂಜಾಬ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಮರಿಂದರ್ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂಬ ಭಾವನೆ ದಟ್ಟವಾಗಿತ್ತಾದ್ದರೂ, ಮಾಜಿ ಕ್ರಿಕೆಟಿಗ ನವಜೋತ ಸಿಂಗ್ ಸಿಧು ಅವರು ಬಿಜೆಪಿ ತೊರೆದು ಕಾಂಗ್ರೆಸಿಗೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಅಮರಿಂದರ್‌ಗೆ ಮುಖ್ಯಮಂತ್ರಿ ಹುದ್ದೆ ದೊರೆಯದಿರಬಹುದು ಎಂಬ ವದಂತಿಗಳು ಕೇಳಿಬಂದಿದ್ದವು. ರಾಹುಲ್ ಘೋಷಣೆ ಈ ವದಂತಿಗಳಿಗೆ ಅಂತ್ಯ ಹಾಡಿದೆ.







