ಸದ್ದು ಮಾಡುತ್ತಿದೆ ‘ಶುದ್ಧಿ’

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಸಾಲು ಸಾಲಾಗಿ ನ್ಯೂಜನರೇಶನ್ ಚಿತ್ರಗಳು ದಾಪುಗಾಲಿಡುತ್ತಿವೆ. ಈ ಚಿತ್ರಗಳ ಮುಂದೆ ಈಗೀಗ ಮಾಮೂಲಿ ಹೊಡಿಬಡಿ ಚಿತ್ರಗಳ ಅಬ್ಬರ ತಗ್ಗಿರುವುದಂತೂ ನಿಜ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಆರೋಗ್ಯಕರ ಬೆಳವಣಿಗೆ.
ಆದರ್ಶ್ ಈಶ್ವರಪ್ಪ ಚೊಚ್ಚಲ ನಿರ್ದೇಶನದ ಶುದ್ಧಿ ಕೂಡಾ ಬಿಡುಗಡೆಗೆ ಮೊದಲೇ ಹಲವಾರು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಸ್ತ್ರೀ ಕೇಂದ್ರೀತ ಥ್ರಿಲ್ಲರ್ ಕಥಾವಸ್ತುವನ್ನು ಹೊಂದಿರುವ ಈ ಚಿತ್ರಕ್ಕೆ ಮೂವರು ನಾಯಕಿಯರು.
ಸೇಡು ತೀರಿಸುವ ಉದ್ದೇಶದಿಂದ ಅಧ್ಯಾತ್ಮಿಕ ಪ್ರವಾಸದ ಸೋಗಿನಲ್ಲಿ ಭಾರತಕ್ಕೆ ಆಗಮಿಸುವ ಅಮೆರಿಕನ್ ಯುವತಿ ಹಾಗೂ ದುರ್ಬಲ ಬಾಲಾಪರಾಧ ಕಾನೂನು ವ್ಯವಸ್ಥೆಯ ವಿರುದ್ಧ ಹೋರಾಡುವ ಇಬ್ಬರು ಪತ್ರಕರ್ತೆಯರ ಕುರಿತಾದ ಕಥಾವಸ್ತುವನ್ನು ಹೊಂದಿರುವ ಶುದ್ಧಿಗೆ ದಿಲ್ಲಿಯ ನಿರ್ಭಯಾ ಗ್ಯಾಂಗ್‌ರೇಪ್ ಪ್ರಕರಣ ಪ್ರೇರಣೆಯಂತೆ.
ಅಮೆರಿಕನ್ ಯುವತಿ ಲಾರೆನ್ ಸ್ಪಾರ್ಟನೊ, ನಿವೇದಿತಾ ಹಾಗೂ ಅಮೃತ ಈ ಚಿತ್ರದ ಮೂವರು ನಾಯಕಿಯರು. ನ್ಯೂಯಾರ್ಕ್ ಫಿಲ್ಮ್ ಇನ್ಸ್ ಟಿಟ್ಯೂಟ್‌ನ ನಿರ್ದೇಶನ ತರಬೇತಿ ಪಡೆದಿರುವ ಆದರ್ಶ್‌ಗೆ ಈ ಚಿತ್ರವು ದೊಡ್ಡದೊಂದು ಬ್ರೇಕ್ ನೀಡುವ ನಿರೀಕ್ಷೆಯಿದೆ. ಉದಯೋನ್ಮುಖ ನಟರಾದ ಶಶಾಂಕ್ ಪುರುಷೋತ್ತಮ್ ಹಾಗೂ ಸಿದ್ಧಾರ್ಥ ಮಾಧ್ಯಮಿಕ ಅವರು ಕ್ರೈಂಬ್ರಾಂಚ್ ಅಧಿಕಾರಿಗಳ ಪಾತ್ರದಲ್ಲಿ ನಟಿಸಿದ್ದಾರೆ.





