ಭಿನ್ನತೆ ಬದಿಗಿಟ್ಟು ಐಕ್ಯರಾಗೋಣ: ಇಮಾಮ್ ಶೇಖ್ ಅಬ್ದುರ್ರಝಾಕ್ ಜಾಮಈ
ಎಸ್‌ಕೆಎಸ್‌ಎಂ ನಿಂದ ಆದರ್ಶ ಘೋಷಣಾ ಸಮ್ಮೇಳನ

ಮಂಗಳೂರು, ಜ. 26: ಒಂದೇ ಗ್ರಂಥ ಮತ್ತು ಒಂದೇ ಪ್ರವಾದಿಯ ಅನುಯಾಯಿಗಳಾಗಿರುವ ಮುಸ್ಲಿಮರು ವಿವಿಧ ಪಂಗಡಗಳಾಗಿ ಪ್ರತ್ಯೇಕಿಸಲ್ಪಟ್ಟು ಪರಸ್ಪರ ದೂಷಣೆಯಲ್ಲಿ ತೊಡಗಿರುವುದು ಅತ್ಯಂತ ವಿಷಾದನೀಯ. ಇಸ್ಲಾಮಿನಲ್ಲಿ ಅವಕಾಶಗಳಿಲ್ಲದ ಇಂತಹ ದೂಷಣೆ, ಭಿನ್ನತೆಯನ್ನು ಬದಿಗಿಟ್ಟು ಐಕ್ಯರಾಗುವಂತೆ ಹುಬ್ಬಳಿ ಜುಮಾ ಮಸೀದಿಯ ಇಮಾಮ್ ಶೇಖ್ ಅಬ್ದುರ್ರಝಾಕ್ ಜಾಮಈ, ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ (ಎಸ್‌ಕೆಎಸ್‌ಎಂ) ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ನಡೆದ ಆದರ್ಶ ಘೋಷಣಾ ಸಮ್ಮೇಳನದಲ್ಲಿ ‘ಇತ್ತಿಹಾದ್ ಔರ್ ಇತ್ತಿಫಾಕ್ ಕಿಸ್ ಬುನ್ಯಾದ್ ಪೆ?’ (ಐಕ್ಯತೆ ಮತ್ತು ಭಿನ್ನತೆ; ಆಧಾರವೇನು?) ಎಂಬ ವಿಷಯದಲ್ಲಿ ಉರ್ದುವಿನಲ್ಲಿ ಮಾತನಾಡಿದರು.
ಮುಸ್ಲಿಮರು ಇಂದು ವಿವಿಧ ಪಂಗಡ, ಸಂಘಟನೆ, ಉಪ ಸಂಘಟನೆಗಳ ಹೆಸರಿನಲ್ಲಿ ಪ್ರತ್ಯೇಕವಾಗಿ ಗುರುತಿಸಲ್ಪಟ್ಟಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ಇಂತಹ ಚಟುವಟಿಕೆಗಳು ದೇವನಿಗೂ ಅಪ್ರಿಯವಾಗಿರುವ ವಿಷಯಗಳಾಗಿವೆ. ಹಗೆತನ ಹುಟ್ಟುಹಾಕಲು ಮತ್ತು ಅದನ್ನು ಸಾಧಿಸಲು ಪ್ರೇರಣೆ ನೀಡುವ ಇಂತಹ ಚಟುವಟಿಕೆಗಳಿಂದ ದೂರ ಉಳಿದು ಒಗ್ಗೂಡಿಸುವ ಪ್ರಯತ್ನ ಮುಂದುವರಿಯಬೇಕು ಎಂದರು.
ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಚರಿತ್ರೆಯನ್ನು ಅವಲೋಕಿಸಿದರೆ ಅವರು ಜನರ ಮನಸ್ಸುಗಳನ್ನು ಬೇರ್ಪಡಿಸಿರುವ ಉದಾಹರಣೆಗಳು ಇಲ್ಲ. ಜೀವನದುದ್ದಕ್ಕೂ ಅವರು ಸಹನೆಯ ಮೂಲಕ ಜನರನ್ನು ಒಗ್ಗೂಡಿಸಿ ಪರಸ್ಪರರ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡಿರುವುದನ್ನು ಕಾಣಬಹುದು. ಹೃದಯ ಸಂಬಂಧವನ್ನು ಬೆಸೆಯಲು ಅವರು ನೀಡಿರುವ ಪ್ರಾಮುಖ್ಯತೆ ಅವರ ವಚನಗಳಲ್ಲೇ (ಹದೀಸ್) ಉಲ್ಲೇಖವಿದೆ. ಈ ಹಿನ್ನೆಲೆಯಲ್ಲಿ ಅಂತಹದೇ ಪ್ರವಾದಿ(ಸ)ಯವರ ಅನುಯಾಯಿಗಳಾಗಿರುವ ನಾವು ಅವರ ಹಾಕಿಕೊಟ್ಟ ಬುನಾದಿಯಲ್ಲೇ ಮುಂದುವರಿಸೋಣ. ಈ ಮೂಲಕ ಸಾಮಾಜಿಕ ಶಾಂತಿ ಮತ್ತು ಐಕ್ಯತೆಯನ್ನು ಸಾರೋಣ ಎಂದರು.
‘ಅನೈಕ್ಯತೆಯ ದುಷ್ಪರಿಣಾಮ’ ಎಂಬ ವಿಷಯದಲ್ಲಿ ಬ್ಯಾರಿ ಭಾಷೆಯಲ್ಲಿ ಮಾತನಾಡಿದ ಎಸ್‌ಕೆಎಸ್‌ಎಂ ಉಚ್ಚಿಲ ಘಟಕದ ಕಾರ್ಯದರ್ಶಿ ಜನಾಬ್ ಅಲಿ ಉಮರ್ ಅವರು, ಹರಿ ಹಂಚಿ ಹೋಗಿರುವ ಮುಸ್ಲಿಮರು ಒಂದು ಸೇರಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾಜವನ್ನು ಕಟ್ಟುವಲ್ಲಿ ಮತ್ತು ಶಾಂತಿಗಾಗಿ ಪ್ರವಾದಿ ಮುಹಮ್ಮದ್ (ಸ) ಅವರು ಕಷ್ಟಪಟ್ಟಿದ್ದಾರೆ. ಅವರ ಶಿಷ್ಟಾಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ. ಇಸ್ಲಾಮಿನಲ್ಲಿ ಇಲ್ಲದ ಆಚಾರಗಳಿಗೆ ಕಡಿವಾಣ ಹಾಕೋಣ. ಅನಾಚಾರಗಳ ವಿರುದ್ಧ ಜಾಗೃತಿ ಮೂಡಿಸೋಣ ಎಂದರು.
ವೇದಿಕೆಯಲ್ಲಿ ಎಸ್‌ಕೆಎಸ್‌ಎಂನ ಅಧ್ಯಕ್ಷ ಯು.ಎನ್.ಅಬ್ದುರ್ರಝಾಕ್, ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ, ಪ್ರಧಾನ ಕಾರ್ಯದರ್ಶಿ ಬಶೀರ್ ಶಾಲಿಮಾರ್, ಜೊತೆ ಕಾರ್ಯದರ್ಶಿ ಎಂ.ಜಿ.ಮುಹಮ್ಮದ್ ಉಪಸ್ಥಿತರಿದ್ದರು.







