ಇಲಾಖೆಗಳಿಗೆ ಕೊರಗರ ಅಭಿವೃದ್ಧಿ ಹೊಣೆ: ಉಡುಪಿ ಜಿಲ್ಲಾಧಿಕಾರಿ
ಸಚಿವರ ಗ್ರಾಮವಾಸ್ತವ್ಯದ ಬಳಿಕ ಕಾರ್ಯಕ್ರಮಕ್ಕೆ ವೇಗ

ಉಡುಪಿ, ಜ.27: ಜಿಲ್ಲೆಯಲ್ಲಿರುವ ಕೊರಗ ಜನಾಂಗದವರಿಗೆ ಪ್ರತಿ ಯೊಂದು ಇಲಾಖೆಗಳು ತಮ್ಮಲ್ಲಿ ಇರುವ ಯೋಜನೆಗಳ ಸಮಗ್ರ ಮಾಹಿತಿ ಒದಗಿಸಿ, ಕೊರಗರ ಸರ್ವತೋಮುಖ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದ್ದಾರೆ.
ಶುಕ್ರವಾರ ಮಣಿಪಾಲದಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ನಡೆದ ಕೊರಗರ ಅಭಿವೃದ್ಧಿ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕುಂದಾಪುರ ತಾಲೂಕಿನ ಕಾಲ್ತೋಡು ಗ್ರಾಪಂ ವ್ಯಾಪ್ತಿಯ ಮೂರೂರು ಕೊರಗರ ಕಾಲೋನಿಯಲ್ಲಿ ರಾಜ್ಯದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಗ್ರಾಮ ವಾಸ್ತವ್ಯ ಮಾಡಿದ ನಂತರ ಕೊರಗರ ಅಭಿವೃದ್ದಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.
ಕೊರಗ ಜನಾಂಗದವರಿಗೆ ನಿವೇಶನ ಒದಗಿಸುವ ಕುರಿತಂತೆ ಭೂಒಡೆತನ ಯೋಜನೆಯಲ್ಲಿ ಭೂಮಿ ನೀಡಲು ಅವಕಾಶವಿದ್ದು, ಕೊರಗ ಮುಖಂಡರು ಮತ್ತು ಅಧಿಕಾರಿಗಳಿಗೆ ಜಾಗ ಗುರುತಿಸುವಂತೆ ತಿಳಿಸಲಾಗಿದೆ. ಜಮೀನಿನ ಹಕ್ಕುಪತ್ರಗಳ ವಿತರಣೆ ಹಾಗೂ ಆರ್‌ಟಿಸಿಯ ದೋಷಗಳನ್ನು ಸರಿಪಡಿಸುವ ಕುರಿತಂತೆ ಕುಂದಾಪುರದ ಸಹಾಯಕ ಆಯುಕ್ತರಿಗೆ ಕೊರಗ ಕಾಲೋನಿಗಳಲ್ಲಿ ವಿಶೇಷ ಕ್ಯಾಂಪ್ ಮಾಡಿ, ದೋಷ ಸರಿಪಡಿಸಿಕೊಡುವಂತೆ ನಿರ್ದೇಶನ ನೀಡಲಾಗಿದೆ ಎಂದು ವೆಂಕಟೇಶ್ ವಿವರಿಸಿದರು.
ಸಾಮಾಜಿಕ ಭದ್ರತಾ ಯೋಜನೆಯಲ್ಲಿ ವಿವಿಧ ಪಿಂಚಣಿ ಯೋಜನೆಗಳಿಂದ ವಂಚಿತರಾಗಿರುವ ಅರ್ಹ ಫಲಾನುವಿಗಳನ್ನು ಗುರುತಿಸಿ ಪಿಂಚಣಿ ವಿತರಿಸುವಂತೆ, ಸರಕಾರಿ ನೌಕರಿಯಲ್ಲಿರುವ ಕೊರಗರನ್ನು ಹೊರತುಪಡಿಸಿ ಅರ್ಹ ಕೊರಗರಿಗೆ ಬಿಪಿಎಲ್ ಮತ್ತು ಎವೈ ಕಾರ್ಡ್ ವಿತರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅರಣ್ಯ ಹಕ್ಕು ಕಾಯಿದೆಯಡಿ ಮತ್ತು 94ಸಿ, 94ಸಿಸಿಯಡಿ ಹಕ್ಕುಪತ್ರ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶವಿದ್ದು, ಇದರ ಸದುಪಯೋಗ ಪಡೆದು ಕೊಳ್ಳುವಂತೆ ಹಾಗೂ ಸರಕಾರದಿಂದ ವ್ಯವಸಾಯ ಭೂಮಿ ಪಡೆದು ಉಳುಮೆ ಮಾಡದೆ ಖಾಲಿ ಇರುವ ಕೊರಗರ ಜಮೀನಿನಲ್ಲಿ ಕೃಷಿ ಇಲಾಖೆಯ ಮೂಲಕ ಕೃಷಿ ಚಟುವಟಿಕೆ ಕೈಗೊಳ್ಳುವಂತೆ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕೊರಗ ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ಎಲ್ಲ ಕಾಲೋನಿಗಳಲ್ಲಿ ಜ.30 ರಿಂದ ಫೆ.25ರವರೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ತಮ್ಮ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ವೆಂಕಟೇಶ್ ವಿವರಿಸಿದರು.
ಸಭೆಯಲ್ಲಿ ಜಿಪಂ ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಮರನಾಥ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ , ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಹರೀಶ್ ಗಾಂವ್ಕರ್ ಹಾಗೂ ವಿವಿಧ ಇಲಾಖೆಗ ಅಧಿಕಾರಿಗಳು ಉಪಸ್ಥಿತರಿದ್ದರು.







