ನ್ಯಾಯಾಂಗದ ಮೇಲೆ ಜನರ ಭರವಸೆ ಹೋಗಬಾರದು : ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ವಿಶೇಷ ಉಪನ್ಯಾಸ

ಪುತ್ತೂರು , ಜ.27 : ಇವತ್ತಿನ ಸಮಾಜದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಸಹಾಯ ಮಾಡದಿದ್ದರೂ ಪರವಾಗಿಲ್ಲ. ನ್ಯಾಯಾಂಗ ರಕ್ಷಣೆ ಮಾಡುತ್ತದೆ ಎಂಬ ಭರವಸೆ ಇದೆ. ಅದನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದು ಭಾರತ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ, ಕರ್ನಾಟಕದ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದರು.
ವಕೀಲರ ಸಂಘದ ವತಿಯಿಂದ ಇಲ್ಲಿನ ಪರಾಶರ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಲೋಕಾಯುಕ್ತ ಸಂಸ್ಥೆ ಜನರ ಸೇವೆಗಾಗಿ ಸೃಷ್ಟಿ ಮಾಡಿದ ಸರಕಾರದ ಸಂಸ್ಥೆ, ಆದರೆ ಆ ಸರಕಾರದಿಂದಲೇ ಜನರಿಗೆ ಆಗುವ ಅನ್ಯಾಯವನ್ನು ನಾನು ಕಂಡೆ. ಇವತ್ತು ಸಮಾಜದಲ್ಲಿ ಬಹಳಷ್ಟು ಮೌಲ್ಯಗಳು ಕುಸಿತಗೊಂಡಿವೆ. ಮಾಡುವ ಕೆಲಸ, ಸಿಗುವ ಸಂಬಳದಲ್ಲಿ ತೃಪ್ತಿ ಇಲ್ಲದೆ ದುರಾಸೆ ಹುಟ್ಟುತ್ತದೆ. ಮಾನವಿಯತೆಯನ್ನು ಅಳವಡಿಸಿ ತೋರಿಸಿದರೂ ಸಾಯುವಾಗ ಮಾನವಾಗಿ ಸಾಯಬೇಕು. ಇವತ್ತು ಸಮಾಜವನ್ನು ಬದಲಾಯಿಸಬೇಕು. ಸಮಾಜದಲ್ಲಿನ ಭ್ರಷ್ಟರನ್ನು ಬಹಿಷ್ಕರಿಸುವ ಸಮಾಜ ಕಟ್ಟಬೇಕೆಂದು ಹೇಳಿದರು.
ನಮ್ಮ ಹಿರಿಯರು ನಮ್ಮ ಸಂವಿಧಾನದಲ್ಲಿ ರಚನೆ ಮಾಡಿದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಂಬ ಮೂರು ಸ್ಥಂಭಗಳು ಇವತ್ತು ಏನಾಗಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟ ಸಂತೋಷ್ ಹೆಗ್ಡೆಯವರು , ಕಳೆದ ಚಳಿಗಾಲದ ಅಧಿವೇಶನದಲ್ಲಿ 24 ದಿವಸ ಲೋಕಸಭೆ ಚರ್ಚೆ ನಡೆಯಿತು. ಒಂದು ಮಸೂದೆ ಪಾಸ್ ಮಾಡಲು ಆಗಿಲ್ಲ. ಪ್ರಧಾನಿ ಸಭೆಗೆ ಬಂದಿಲ್ಲ. ಬಂದರೆ ಮಾತನಾಡಿಲ್ಲ ಎಂಬ ಆರೋಪ ಪ್ರತ್ಯಾರೋಪದಲ್ಲೇ ಮುಗಿಯಿತು. ಆದರೆ ಲೋಕಸಭೆಯ ಒಂದು ದಿನದ ಖರ್ಚು ರೂ. 10 ಕೋಟಿ ಮತ್ತು ಸಚಿವರಿಗೆ ಮಾಸಿಕ ಸಂಬಳ, ಸಿಟ್ಟಿಂಗ್ ಪೀಸ್ ಬೇರೆನೆ ಇದ್ದರೂ ಪ್ರಯೋಜನವೇನು. ಮುಂದಿನ ಹಂತದಲ್ಲಿ ಕಾರ್ಯಾಂಗದಲ್ಲೂ ಹುದ್ದೆಗೆ ಲಕ್ಷ ಲಕ್ಷ ನೀಡುವ ಪರಿಸ್ಥಿತಿಯಿದ್ದು, ಮೂರನೆ ಸ್ಥಂಭವಾದ ನ್ಯಾಯಾಂಗದಲ್ಲೂ ತೀರ್ಪು ಬರುವಾಗ ಕಕ್ಷಿದಾರ ಇರುತ್ತಾನೋ ಇಲ್ಲವೋ ಎಂಬ ಅನುಮಾನ. ನ್ಯಾಯಾಂಗದಲ್ಲಿ ಎಷ್ಟು ಬೇಗ ಸುಧಾರಣೆ ಬರುತ್ತದೆಯೋ ಅದು ಜನರ ಮನಸ್ಸನ್ನು ಗೆಲ್ಲುತ್ತದೆ. ಈ ಕುರಿತು ನಮ್ಮಲ್ಲಿರುವ ಕುಂದುಕೊರತೆಗಳನ್ನು ಚರ್ಚೆ ಮಾಡೋಣ, ಅದಕ್ಕೆ ಬೇಕಾದಂತಹ ಉಪಾಯ ಕಂಡು ಹಿಡಿಯೋಣ, ನ್ಯಾಯಾಂಗದ ಮೇಲೆ ಜನರ ಭರವಸೆ ಹೋಗದಂತೆ ನಾವು ನೋಡಿಕೊಳ್ಳೋಣ ಎಂದರು.
ಕಾನೂನು ಪದವಿಯಲ್ಲಿ ರ್ಯಾಂಕ್ ವಿಜೇತರಿಗೆ ಸನ್ಮಾನ:
ಕಾನೂನು ಪದವಿ ಪರೀಕ್ಷೆಯಲ್ಲಿ ಕನ್ನಡದಲ್ಲೇ ಬರೆದು ರ್ಯಾಂಕ್‌ಗಳಿಸಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಈರ್ವರು ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ತಿಮ್ಮಪ್ಪ ಪೂಜಾರಿ ಮತ್ತು ರೇವತಿ ದಂಪತಿ ಪುತ್ರಿ 3ನೇ ರ‍್ಯಾಂಕ್ ಪಡೆದ ಕಾವ್ಯ ಮತ್ತು ಇಳಂತಾಜೆ ಶ್ರೀಧರ್ ಶೆಟ್ಟಿ ಮತ್ತು ಹರಿಣಾಕ್ಷಿ ದಂಪತಿ ಪುತ್ರಿ 6ನೇ ರ‍್ಯಾಂಕ್ ಪಡೆದ ದೀಪಿಕಾ ಶೆಟ್ಟಿಯವರನ್ನು ಸಂತೋಷ್ ಹೆಗ್ಡೆಯವರು ಸನ್ಮಾನಿಸಿದರು.
ಕಾನೂನು ಸೇವಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ರವೀಂದ್ರನಾಥ ರೈ, 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ರಾಮಚಂದ್ರ, ಪ್ರಧಾನ ಹಿರಿಯ ನ್ಯಾಯಾಧೀಶ ಸಿ.ಕೆ.ಬಸವರಾಜ್, ಹೆಚ್ಚುವರಿ ಹಿರಿಯ ನ್ಯಾಯಾಧೀಶ ನಾಗರಾಜ್, ಜೆ.ಎಂ.ಎಫ್.ಸಿ ನ್ಯಾಯಾಧೀಶ ವಿಜಯ್, ವಕೀಲರ ಸಂಘದ ಉಪಾಧ್ಯಕ್ಷ ಮಹಾಬಲ ಗೌಡ, ಖಜಾಂಜಿ ಕುಮಾರ್‌ನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಸ್ವಾಗತಿಸಿ, ಕಾರ್ಯದರ್ಶಿ ಕೃಷ್ಣಪ್ರಸಾದ್ ವಂದಿಸಿದರು. ನ್ಯಾಯವಾದಿ ಗೌರಿ ಶಂಕರ್ ಶಾನ್‌ಬೋಗ್ ಕಾರ್ಯಕ್ರಮ ನಿರೂಪಿಸಿದರು.







