ಮುಲ್ಕಿ : ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ-2017
ಮುಲ್ಕಿ, ಜ.27: ದೇಶ ಶ್ವಾತಂತ್ರ ಪಡೆದು 6 ದಶಕಗಳು ಕಳೆದರೂ ಶಿಕ್ಷಣ ಕ್ಷೇತ್ರದಲ್ಲಿ ರಾಜಕಾರಣಿಗಳು ಅಧಿಕಾರಿಗಳ ಭ್ರಷ್ಟಾಚಾರದ ಫಲವಾಗಿ ಸಮಗ್ರ ಶಿಕ್ಷಣ ಜಾರಿಯಾಗಿಲ್ಲ ಎಂದು ಬೆಂಗಳೂರು ಮಾನವ ಧರ್ಮ ಪೀಠದ ಶಿವಾಯುತ ಧರ್ಮಗುರು ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ, ಹಳೆಯಂಗಡಿ ಗ್ರಾಮ ಪಂಚಾಯತ್‌ನ ಅಪ್ನಾದೇಶ್‌ಗಳ ಸಹಯೋಗದೊಂದಿಗೆ ಹಳೆಯಂಗಡಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದ ಮಾಜಿ ಶಾಸಕ ದವಂಗತ ಸೋಮಪ್ಪ ಸುವರ್ಣ ವೇದಿಕೆಯಲ್ಲಿ ಶುಕ್ರವಾರ ನಡೆದ ‘ಶಿಕ್ಷಣ ಶಿಲ್ಪಿ’ ಮಾಸಪತ್ರಿಕೆಯ ನಾಲ್ಕನೆ ವರ್ಷಾಚರಣೆ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ-2017ಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಶಿಕ್ಷಣ ಕ್ಷೇತ್ರದಲ್ಲಿರುವಷ್ಟು ಗೊಂದಲಗಳು ಬೇರೆ ಯಾವ ಕ್ಷೇತ್ರದಲ್ಲಿ ಇಲ್ಲ. ಗೊಂದಲಗಳಿಗೆ ರಾಷ್ಟ್ರೀಯ ಸಮಗ್ರ ಶಿಕ್ಷಣ ಹಾಗೂ ರಾಜ್ಯ ಸಮಗ್ರ ಶೀಕ್ಷಣ ನೀತಿಗಳಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಎಂದ ಶ್ರೀಗಳು, ದೇಶದಲ್ಲಿ ಸಮಗ್ರ ಏಕ ಶಿಕ್ಷಣ ನೀತಿಯಿಂದ ಮಾತ್ರ ಶಿಕ್ಷಣ ಕ್ಷೇತ್ರದ ಭ್ರಷ್ಟಾಚಾರಗಳು ಅಳಿಯಲು ಸಾಧ್ಯ ಎಂದರು.
ಭಾವನೆಗಳಿಂದ ಕನ್ನಡ ಭಾಷೆ ಬೆಳೆಯದು, ಭಾಷೆ ಬೆಳೆಯಬೇಕಿದ್ದಲ್ಲಿ ಕನ್ನಡ ಭಾಷೆಯ ಬಗ್ಗೆ ಪ್ರೀತಿ ಇರಬೇಕು. ರಾಜ್ಯದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳು ಕನ್ನಡದಲ್ಲೇ ನಡೆದರೆ, ಕನ್ನಡ ಭಾಷೆ ಅನ್ನ ನೀಡುವ ಭಾಷೆಯಾಗಿ ಪರಿವರ್ತನೆಗೊಳ್ಳುವುದು. ಭಾಷಾ ನೀತಿ ಇಂದಿಗೂ ಜೀವಂತವಾಗಿದೆ ಎಂದ ಅವರು ಬಗೆ ಹರಿಸಲು ಸಾಧ್ಯವಾಗದೆ ಗೊಂದಲದ ಗೂಡಾಗಿ ಪರಿಣಮಿಸಿವೆ ಎಂದರು.
ಶೀಕ್ಷಣ ಸೇರಿದಂತೆ ಸಂಸ್ಕ್ರತಿ, ಆಡಳಿತಗಳು ಮಾರುಕಟ್ಟೆ ಆಧಾರಿತವಾಗಿ ಬೆಳೆಯುತ್ತಿದೆ. ಸರಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳು ಎಂಬ ಅಂತರವನ್ನು ಸರಕಾರಗಳೇ ಪೋಶಿಸುತ್ತಿರುವ ಕಾರಣ ಸರಕಾರಗಳಿಗೆ ಏಕ ರೂಪ ಶಿಕ್ಷಣ ನೀತಿ ಅನುಷ್ಠಾನಕ್ಕೆ ಧೃಡ ನಿಲುವು ತಳೆಯಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.
ದೇಶ ಮುಂದೆ ಬರಲು ಶಿಕ್ಷಣ ಬುನಾದಿಯಾದ್ದು, ಶಿಕ್ಷಣ ವ್ಯಾಪಾರದ ಸರಕಾಗಿ ಬಳಸಲಾಗುತ್ತಿದೆ. ಸಮಾಜದಲ್ಲಿ ಬಡವ-ಶ್ರೀಮಂತ ಎಂಬ ತಾರತಮ್ಯಕ್ಕೂ ಶಿಕ್ಷಣ ಕಾರಣವಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ ವೀರಮಲ್ಲ ಶ್ರೀಗಳು, ಉಚಿತ ಏಕರೂಪ ಗುಣಮಟ್ಟದ ಪ್ರಾಥಮಿಕ, ಪೌಢ ಶಿಕ್ಷಣ ನೀಡುವಂತಾಗಬೇಕು ಎಂದರು.
ಪುಟ್ಟ ಮಕ್ಕಳನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ಆಘಾತಕಾರಿ. ಅಲ್ಲದೆ, ಪುಟ್ಟ ವಯಸ್ಸಿನ ಮಕ್ಕಳು ಅತ್ಯಾಚಾರ, ಆತ್ಮಹತ್ಯೆಗಳಿಗೆ ಮುಖಮಾಡಿರುವುದು ಅಪಾಯಕಾರಿ ಬೆಳವಣಿಗೆ. ಯುವ ಜನಾಂಗ ಮಾದಕ ವ್ಯಸನಗಳ ದಾಸರಾಗುತ್ತಿದ್ದು ಒಟ್ಟಾರೆ, ಗುಣಮಟ್ಟ ರಹಿತ ಶಿಕ್ಷಣದ ಫಲವಾಗಿ ದುರ್ಬಲ ಮನಸ್ಸಿನ ಜನಾಂಗ ಸೃಷ್ಠಿಯಾಗುತ್ತಿದೆ. ಮಾನವೀಯ, ನೈತಿಕ ವೌಲ್ಯಯುತ ಗುಣಮಟ್ಟದ ಶಿಕ್ಷಣ ನೀಡಬಲ್ಲ ಮಾತೃ ಮನಸ್ಸಿನ ಶಿಕ್ಷಕರ ಅಹತ್ಯ ಇದೆ ಎಂದು ಶ್ರೀಗಳು ತಿಳಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಣ ಶಿಲ್ಪಿ ಪತ್ರಿಕೆಯ ಸಂಪಾದಕ ಡಾ. ಕೋ. ಪೆಂ. ರಾಮಕೃಷ್ಣೇಗೌಡ, ಪಶುತ್ವ ಹೋಗಲಾಡಿಸುವುದನ್ನು ಶಿಕ್ಷಣ ಎನ್ನಲಾಗುತ್ತದೆ. ಶಿಕ್ಷಣದಿಂದ ಲಂಚ, ಭ್ರಷ್ಟಾಚಾರಗಳು ಬೆಳೆಯುವಂತಿರಬಾರದು. ವಿದ್ಯಾವಂತರು ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಪರಮ ಪವಿತ್ರ ಶಿಕ್ಷಣ ಕ್ಷೇತ್ರದಲ್ಲಿ ಭ್ರಷ್ಠಾಚಾರಗಳು ಹೆಚ್ಚುತ್ತಿರುವುದು ಅಪಾಯಕಾರಿ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಖ್ಯಾತ ಮನೋವೈದ್ಯ ಹಾಗೂ ಕೆಜಿವಿಎಸ್‌ನ ರಾಜ್ಯಾಧ್ಯಕ್ಷ ಡಾ. ಸಿ.ಆರ್ ಚಂದ್ರ ಶೇಖರ್ ವಹಿಸಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಪ್ರಾಥಮಿಕ, ಪೌಢಶಾಲೆ, ಕಾಲೇಜು ವಿಭಾಗ ಸೇರಿದಂತೆ ವಿಶೇಷ ವಿಭಾಗದ ಒಟ್ಟು ಹದಿನೈದು ಶಿಕ್ಷಕರಿಗೆ ‘ಶಿಕ್ಷಣ ಶಿಲ್ಪಿ’ ಪ್ರಶಸ್ತಿ ಪದಾನ ಮಾಡಲಾಯಿತು.
ಸಮಾರಂಭದಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ ಸಮಿತಿಯ ಅಧ್ಯಕ್ಷೆ ನಂದಾ ಪಾಯಸ್, ಕಾರ್ಯಾಧ್ಯಕ್ಷ ವಸಂತ್ ಬೆರ್ನಾರ್ಡ್, ಉಪಾಧ್ಯಕ್ಷ ರೆನ್ನಿ ಡಿ ಸೋಜಾ, ಪ್ರಧಾನ ಕಾರ್ಯದರ್ಶಿ ಶಾಲೆಟ್ ಪಿಂಟೋ, ಹಳೆಯಂಗಡಿ ಗ್ರಾಮ ಪಂಚಾಯತ್ ಪಂಚಾಯತ್ ಅಧ್ಯಕ್ಷೆ ಜಲಜಾ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಾಶ್ವತ ಅನುದಾನ ರಹಿತ ಶಾಲಾ ಕಾಲೇಜುಗಳು ಸುಲಿಗೆಗೆಗೆ ಪರವಾನಿಗೆ ನೀಡಿದ ಸಂಸ್ಥೆಗಳು ಎಂದ ಶ್ರೀಗಳು, ಆಡಳಿತಗಾರರ ಇಬ್ಬಗೆ ನೀತಿ, ಡಾಂಬಿಕ ಕಾಟಾಚಾರದ ಮಾತುಗಳಿಂದ ಪ್ರಯೋಜನ ವಿಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಹೆಚ್ಚಿ ನ ಮೀಸಲಾತಿಗಳನ್ನು ನೀಡಬೇಕು ಎಂದು ಬೆಂಗಳೂರು ಮಾನವ ಧರ್ಮ ಪೀಠದ ಶಿವಾಯುತ ಧರ್ಮಗುರು ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ನುಡಿದರು.
ಪಠ್ಯ ಪುಸ್ತಕ ಪರಿಷ್ಕರಣೆ ಉತ್ತಮ ಬೆಳವಣಿಗೆ. ಆದರೆ, ಪಠ್ಯ ಪುಸ್ತಕದ ಪರಿಷ್ಕರಣೆಗೆ ಜನಾಭಿಪ್ರಾಯ ಪಡೆಯುದು ಸಮಂಜಸವಲ್ಲ. ಅವಿವೇಕತನ. ಕನ್ನಡ ವಿನಾಶದಂಚಿಗೆ ತಲುಪಲು ಕನ್ನಡದ ಅಧಿಕಾರಿಗಳೇ ಮುಖ್ಯ ಕಾರಣ. ಅಧಿಕಾರಿಗಳು ತಮಗೆ ಬೇಕಾದ ರೀತಿಯಲ್ಲಿ ಕಾನೂನುಗಳ ರಚನೆಯಲ್ಲಿ ತೊಡಗಿರುವುದರಿಂದ ಕನ್ನಡ ಭಾಷೆ, ಸಂಸ್ಕೃತಿಗೆ ಹಿನ್ನಡೆಯಾಗಿದೆ.
* ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ,
ಶಿವಾಯುತ ಧರ್ಮಗುರು, ಮಾನವ ಧರ್ಮ ಪೀಠ ಬೆಂಗಳೂರು
15 ಅಧ್ಯಾಪಕರಿಗೆ ‘ಶಿಕ್ಷಣ ಶಿಲ್ಪಿ’ ಪ್ರಶಸ್ತಿ ಪ್ರದಾನ:
ಪ್ರಾಥಮಿಕ ವಿಭಾಗ:
ಸೋಮಶೇಖರ ಟಿ.ಎಂ. -ಹಾಸನ ಜಿಲ್ಲೆ
ಹೊನ್ನೇಗೌಡ - ಹಾಸನ ಜಿಲ್ಲೆ
ಪರಮನಾಯ್ಕ ಪಿ. - ಚಿಕ್ಕಮಗಳೂರು ಜಿಲ್ಲೆ ಎಚ್.ಎಸ್. ಅಮಬಿಗೇರ- ಗದಗ ಜಿಲ್ಲೆ
ಸುಧಾ ಎನ್. ಭಂಡಾರಿ- ಉತ್ತರ ಕನ್ನಡ ಜಿಲ್ಲೆ
ಸಿದ್ದಪ್ಪ ಎನ್. - ದಾವಣಗೆರೆ
ಪೌಢಶಾಲಾ ವಿಭಾಗ:
ಎಂ.ಆರ್. ಕಬಾಡೆ - ವಿಜಯಪುರ ಜಿಲ್ಲೆ
ಹರಳೂರು ಶಿವ ಕುಮಾರ - ತುಮಕೂರು ಜಿಲ್ಲೆ
ರುದ್ರಪ್ಪ ಎಸ್. ತಳವಾರ - ಯಾದಗಿರಿ ಜಿಲ್ಲೆ
ಎಸ್.ವಿ. ಬುರ್ಲಿ - ವಿಜಯ ಪುರ ಜಿಲ್ಲೆ
ದಿನೇಶ್ ಶೆಟ್ಟಿಗಾರ್ - ಉಡುಪಿ ಜಿಲ್ಲೆ
ಪುರಂದರ ನಾರಾಯಣ ಭಟ್ ಕೆ. - ದ.ಕ ಜಿಲ್ಲೆ
ಕಾಲೇಜು ವಿಭಾಗ:
ಡಾ. ಕೆ.ವಿ. ಮಹೇಂದ್ರ ಪ್ರಶಾಂತ್ - ಎಸ್.ಜೆ.ಬಿ. ತಾಂತ್ರಿಕ ಮಹಾವಿದ್ಯಾಲಯ ಬೆಂಗಳೂರು.
ವಿಶೇಷ ಪ್ರಶಸ್ತಿ ಪುರಸ್ಕ್ರತರು:
ಡಾ. ಎಂ.ಜೆ. ಸುಂದರ ರಾಮ್ - ಬೆಂಗಳೂರು
ಡಾ. ರಾಧಾ ಕುಲಕರ್ಣ - ಬೆಂಗಳೂರು
ಅನಂತ ಮೂರ್ತಿ ಎಚ್.ಎಂ. - ಬೆಂಗಳೂರು







