ಕುರ್‌ಆನ್-ಸುನ್ನತ್‌ನಲ್ಲಿ ಮುಸ್ಲಿಮರು ಒಗ್ಗಟ್ಟಾಗಲಿ
ಎಸ್‌ಕೆಎಸ್‌ಎಂ ಆದರ್ಶ ಘೋಷಣಾ ಸಮಾವೇಶ

ಮಂಗಳೂರು, ಜ. 26: ‘‘ನೀವು ಅಲ್ಲಾಹನ ಪಾಶವನ್ನು ಬಿಗಿಯಾಗಿ ಹಿಡಿಯಿರಿ. ಭಿನ್ನರಾಗದಿರಿ’’ ಎಂಬ ಪವಿತ್ರ ಕುರ್‌ಆನ್ ಆದೇಶದಂತೆ ಮುಸ್ಲಿಮರು ಪಂಗಡವಾರು ಭಿನ್ನತೆಯನ್ನು ಮರೆತು ಕುರ್‌ಆನ್ ಮತ್ತು ಪ್ರವಾದಿ ಚರ್ಯೆಯಲ್ಲಿ ಒಗ್ಗಟ್ಟಾಗುವಂತೆ ಕೇರಳ ಜಂಇಯ್ಯತುಲ್ ಉಲಮಾದ ಕಾರ್ಯಾಧ್ಯಕ್ಷ ಮೌಲವಿ ಸಿ.ಪಿ. ಉಮರ್ ಸುಲ್ಲಮಿ ಕರೆ ನೀಡಿದ್ದಾರೆ.
ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ವತಿಯಿಂದ ನೆಹರೂ ಮೈದಾನದಲ್ಲಿ ನಡೆದ ಆದರ್ಶ ಘೋಷಣಾ ಸಮ್ಮೇಳನದ ಮಗ್ರಿಬ್ ನಮಾಝಿನ ಬಳಿಕ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಸಂಸ್ಥೆಯ ಕೇಂದ್ರ ಸಮಿತಿಯ ಅಧ್ಯಕ್ಷ ಯು.ಎನ್.ಅಬ್ದುರ್ರಝಾಕ್ ಅಧ್ಯಕ್ಷತೆ ವಹಿಸಿದ್ದರು.
ವಿದ್ವಾಂಸರಾದ ಮೌಲಾನ ಅಬ್ದುರ್ರಝಾಕ್ ಜಾಮಈ , ಉಮರ್ ಶರೀಫ್ ಬೆಂಗಳೂರು, ಮೌಲವಿ ಅಹ್ಮದ್ ಅನಸ್ ಮತ್ತು ಅಲಿ ಉಮರ್ ಮುಂತಾದವರು ಐಕ್ಯತಾ ಸಂದೇಶ ನೀಡಿದರು.
ಎಸ್‌ಕೆಎಸ್‌ಎಂನ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮಾರ್, ಉಪಾಧ್ಯಕ್ಷರಾದ ಅಬ್ದುರ್ರವೂಫ್ ಸೂರಲ್ಪಾಡಿ, ಅಬ್ದುರ್ರಹ್ಮಾನ್ ಮಠ, ಸಲಫಿ ಎಜುಕೇಶನ್ ಬೋರ್ಡ್‌ನ ಅಧ್ಯಕ್ಷ ಮೌಲವಿ ಮುಸ್ತಫಾ ದಾರಿಮಿ, ದಯಾ ಚಾರಿಟೆಬಲ್‌ನ ಟ್ರಸ್ಟ್‌ನ ಅಧ್ಯಕ್ಷ ಸಿ.ಪಿ.ಅಬ್ದುಲ್ಲತೀಫ್, ಕೆಎನ್‌ಎಂ ಇದರ ಕಾಸರಗೋಡು ಜಿಲ್ಲಾಧ್ಯಕ್ಷ ಡಾ.ಅಬೂಬಕರ್ ಕಣ್ಣೂರು , ಜಿಲ್ಲಾಧ್ಯಕ್ಷ ಡಾ.ಬಶೀರ್, ಮೌಲವಿ ಕೆ.ಕೆ.ಪಿ. ಅಬ್ದುಲ್ಲಾ, ಮೌಲವಿ ಉಮರ್ ಸ್ವಲಾಹಿ, ಮೌಲವಿ ಅಬ್ದುರ್ರವೂಫ್ ಮದನಿ, ಸಾಹಿತಿ ಯು.ಎ.ಖಾಸಿಂ ಉಳ್ಳಾಲ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಹಾಫಿಝ್ ಮುಹಮ್ಮದ್ ಜಮೀಲ್ ಕುರ್‌ಆನ್ ಪಠಿಸಿದರು. ಎಂ.ಜಿ.ಮುಹಮ್ಮದ್ ಕನ್ನಡಕ್ಕೆ ಅನುವಾದಿಸಿದರು. ಎಸ್‌ಕೆಎಸ್‌ಎಂನ ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







