ಗ್ರಾಮಸಭೆಯಲ್ಲಿ ಪಿಡಿಒ ವಿರುದ್ಧ ತೆಗೆದ ನಿರ್ಣಯ ರದ್ದುಪಡಿಸಲು ಆಗ್ರಹಿಸಿ ಜ.30ರಂದು ಪ್ರತಿಭಟನೆ
ಬಂಟ್ವಾಳ , ಜ.26 : ತಾಲೂಕಿನ ರಾಯಿ ಗ್ರಾಮ ಪಂಚಾಯತಿಯ ಪಿಡಿಒ ವೆಂಕಟೇಶ್ ವಿರುದ್ಧ ಗ್ರಾಮಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯವನ್ನು ರದ್ದುಪಡಿಸಬೇಕು ಮತ್ತು ಇವರಿಗೆ ಮಾನಸಿಕ ಹಿಂಸೆ, ಕರ್ತವ್ಯಕ್ಕೆ ಅಡ್ಡಿ , ಕಿರುಕುಳ ನೀಡುವವರ ಮೇಲೂ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದ.ಕ.ಜಿಲ್ಲಾ ದಲಿತ ಸೇವಾ ಸಮಿತಿ ವತಿಯಿಂದ ಜ.30 ರಂದು ಬಂಟ್ವಾಳ ತಾ.ಪಂ.ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದು ಸಮಿತಿಯ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ.
ಗುರುವಾರ ಬಿ.ಸಿ.ರೋಡು ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಪಿಡಿಒ ವೆಂಕಟೇಶ್ ವಿರುದ್ಧ ಆರೋಪಗಳನ್ನು ಹೊರಿಸಿ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈಚೆಗೆ ನಡೆದ ಗ್ರಾಮಸಭೆಯಲ್ಲೂ ಇವರ ವಿರುದ್ದ ಲಂಚದ ಆರೋಪ ಹೊರಿಸಿ ಮಾನಸಿಕವಾಗಿ ಕಿರುಕುಳ ನೀಡಲಾಗಿದೆ. ಈ ಸಂದರ್ಭದಲ್ಲಿ ಗ್ರಾಮ ಸಭೆಯ ನೋಡಲ್ ಅಧಿಕಾರಿಯವರು ಪರಿಶೀಲನೆ ನಡೆಸದೆ ಪಿಡಿಒ ರವರ ವರ್ಗಾವಣೆಯ ನಿರ್ಣಯ ಕೈಗೊಂಡಿದ್ದಾರೆ. ಬಳಿಕ ಲಂಚದ ಆರೋಪ ಮಾಡಿರುವ ಅಲ್ಪೋನ್ಸ ಎಂಬವರು ಇದನ್ನು ಅಲ್ಲಗಳೆದಿದ್ದರು. ಈ ಬಗ್ಗೆ ನಮ್ಮ ಸಂಘಟನೆಗೂ ಮಾಹಿತಿ ನೀಡಿದ್ದಾರೆ ಎಂದರು.
ಈ ಹಿನ್ನಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪಿಡಿಒ ವೆಂಕಟೇಶ್ ವಿರುದ್ಧ ಗ್ರಾಮಸಭೆಯಲ್ಲಿ ಕೈಗೊಂಡಿರುವ ನಿರ್ಣಯ ವಾಪಾಸು ಪಡೆಯುವಂತೆ ಹಾಗೂ ಅಲ್ಪೋನ್ಸ್ ಕುಮ್ಮಕ್ಕು ನೀಡಿರುವವರ ಮೇಲೂ ಕ್ರಮಕ್ಕೆ ಒತ್ತಾಯಿಸಿ ಈಗಾಗಲೇ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬಂಟ್ವಾಳ ತಾಪಂ ಇಒ ಗೂ ಮನವಿ ಸಲ್ಲಿಸಿದ್ದು , ಈ ಸಂಬಂಧ ಅಧಿಕಾರಿಗಳಿಂದ ಯಾವುದೇ ಸಕಾರಾತ್ಮಕ ಸ್ಪಂದನ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದ ಅವರು, ಅಧಿಕಾರಿಗಳು ಈ ವಿಚಾರದಲ್ಲಿ ಶನಿವಾರ ಭರವಸೆ ನೀಡಿದರೆ ಪ್ರತಿಭಟನೆ ಹಿಂತೆಗೆದು ಕೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಶೇಖರ ನಾಯ್ಕ, ಗೋಪಾಲ್ ನೇರಳಕಟ್ಟೆ, ಸುರೇಶ್, ಮೋಹನ್ ದಾಸ್ ರವರು ಉಪಸ್ಥಿತರಿದ್ದರು.







