ಶಿವಮೊಗ್ಗ ಜಿಲ್ಲೆಯಲ್ಲಿ ಶೇ.37ರಷ್ಟು ಮಳೆ ಕೊರತೆ
ಶಿವಮೊಗ್ಗ, ಜ.27: ಜಿಲ್ಲೆಯಲ್ಲಿ ಡಿಸೆಂಬರ್ ಅಂತ್ಯಕ್ಕೆ ಶೇ. 37ರಷ್ಟು ಮಳೆ ಕೊರತೆಯಾಗಿದೆ. ವಾಸ್ತವವಾಗಿ 1,10.3 ಮಿ.ಮೀ. ಮಳೆಯಾಗಿದೆ. ವಾಡಿಕೆ ಪ್ರಕಾರ 2,237.3 ಮಿ.ಮೀ ಮಳೆಯಾಗಬೇಕಿತ್ತು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್ ಹೇಳಿದ್ದಾರೆ.
ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ವಿಷಯ ತಿಳಿಸಿದರು.
1,340 ಹೆಕ್ಟೇರ್‌ನಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಗುರಿಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ 901 ಹೆಕ್ಟೇರ್‌ನಲ್ಲಿ ಮಾತ್ರ ಗುರಿ ಸಾಧಿಸಲಾಗಿದೆ. 89,595 ಹೆಕ್ಟೇರ್‌ನಲ್ಲಿ ಶೇ.33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ. ಅತಿ ಹೆಚ್ಚು ಬೆಳೆಹಾನಿ ಶಿಕಾರಿಪುರ ತಾಲೂಕಿನಲ್ಲಿ 29,533 ಹೆಕ್ಟೇರ್‌ನಲ್ಲಿ ಸಂಭವಿಸಿದೆ.
ಕುಡಿಯುವ ನೀರಿನ ಸಮಸ್ಯ ಬಗ್ಗೆ ಮಾತನಾಡಿದ ಗ್ರಾಮೀಣ ಕುಡಿಯುವ ನೀರು ಯೋಜನೆ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಎಂ. ಹರೀಶ್, ಒಟ್ಟು 250 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ 4ನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಪೂರ್ಣಗೊಳಿಸಲಾಗಿದೆ. 150 ಲಕ್ಷ ರೂ. ಇದಕ್ಕೆ ಬಿಡುಗಡೆಯಾಗಿದ್ದು, 148.64 ಲಕ್ಷ ರೂ. ವೆಚ್ಚವಾಗಿದೆ ಎಂದು ಮಾಹಿತಿ ನೀಡಿದರು.
ಬೆಳೆಹಾನಿಗೆ ಕೋರಲಾಗಿರುವ ಪರಿಹಾರ ಧನ (ಲಕ್ಷಗಳಲ್ಲಿ)
ಶಿವಮೊಗ್ಗ 948
ತೀರ್ಥಹಳ್ಳಿ 35
ಸಾಗರ 1,104
ಹೊಸನಗರ 447
ಶಿಕಾರಿಪುರ 2,652
ಸೊರಬ 1,514
ಒಟ್ಟು 7,045 ಲಕ್ಷ ರೂ.







