ಎಸ್ಪಿ ವಿರುದ್ಧ ಎಬಿವಿಪಿಯಿಂದ ಸುಳ್ಳು, ಅವಹೇಳನಕಾರಿ ಹೇಳಿಕೆ: ಆರೋಪ
ಮೂಡಿಗೆರೆ, ಜ.27: ಚಿಕ್ಕಮಗಳೂರು ಚಲೋ ಹೆಸರಿನಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿಯ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈಯವರ ಮೇಲೆ ಸುಳ್ಳು ಮತ್ತು ಅವಹೇಳನಕಾರಿ ರೀತಿಯಲ್ಲಿ ಆರೋಪ ಹೊರಿಸಿರುವುದನ್ನು ಖಂಡಿಸುವುದಾಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಂಜನ್ ಅಜೀತ್ ಕುಮಾರ್ ಹೇಳಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿದ್ದು,ಶೃಂಗೇರಿ ತಾಲೂಕಿನ ಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆ ಪ್ರಕರಣವನ್ನು ಪೊಲೀಸ್ ಇಲಾಖೆ ಉತ್ತಮ ರೀತಿಯಲ್ಲಿ ತನಿಖೆ ನಡೆಸುತ್ತಿದೆ.
ಈ ಕುರಿತು ಎಸ್ಪಿಕೆ.ಅಣ್ಣಾಮಲೈ ಸುದ್ದಿಗೋಷ್ಠಿ ನಡೆಸಿ ಹಾಗೂ ಶೃಂಗೇರಿ ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳಿಗೂ ವಿವರಿಸಿದ್ದಾರೆ.ಪೊಲೀಸರು ತಮ್ಮ ಕಾರ್ಯ ಹಾಗೂ ಅಧಿಕಾರ ವ್ಯಾಪ್ತಿಯೊಳಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕೇ ಹೊರತು ರಾಜಕೀಯ ಕಾರಣದಿಂದ ಅಥವಾ ಒತ್ತಡ ಪರಿಸ್ಥಿತಿಯಿಂದಲ್ಲ ಎಂದಿದ್ದಾರೆ.
ಕಾಲೇಜು ಬಂದ್‌ಗೊಳಿಸಲಿಲ್ಲ ಎಂದು ಕಾಲೇಜು ಎದುರು ಧರಣಿ ನಡೆಸುವುದು,ಕಾಲೇಜಿಗೆ ಕಲ್ಲು ಹೊಡೆಯುವುದು,ಪ್ರತಿಭಟನೆ ಹೆಸರಿನಲ್ಲಿ ಹಿರಿಯ ಅಧಿಕಾರಿಗಳಿಗೆ ಅವಹೇಳನ ಮಾಡುವುದು ಶೋಭೆ ತರುವಂತಾದ್ದಲ್ಲ.ವಿದ್ಯಾರ್ಥಿಗಳು ಕಲಿಕೆ, ಕ್ರೀಡೆ, ಉದ್ಯೋಗದತ್ತ ಗಮನ ಹರಿಸುವ ಜತೆಗೆ ಪೋಷಕರ ಭಾವನೆಗಳನ್ನು,ಅಣತಿಯನ್ನು ಪಾಲಿಸಬೇಕು.ಹಾಗಾದರೆ ಬದುಕಿನಲ್ಲಿ ಉತ್ತಮರಾಗಬಹುದು.ಯಾರು,ಯಾರಿಗೋ ಬಯ್ಯುತ್ತಾ,ಕಲ್ಲು ಹೊಡೆಯುತ್ತಾ ಪ್ರಕರಣ ದಾಖಲಾದರೆ ಭವಿಷ್ಯ ಧೂಳೀಪಟವಾಗುವುದನ್ನು ತಪ್ಪಿಸಲಾಗದು ಎಂದು ಎಚ್ಚರಿಕೆ ನೀಡಿದ್ದಾರೆ.







