ಇಂದು ಸಹೋದರಿಯರ ಸವಾಲ್
ಮ್ಯಾಟೆಕ್ಸ್ಯಾಂಡ್ಸ್-ಸಫರೋವಾ ಮುಡಿಗೆ ಡಬಲ್ಸ್ ಕಿರೀಟ, ಫೆಡರರ್‌ಗೆ ನಡಾಲ್ ಎದುರಾಳಿ

ಮೆಲ್ಬೋರ್ನ್, ಜ.27: ವಿಲಿಯಮ್ಸ್ ಸಹೋದರಿಯರಾದ ಸೆರೆನಾ ಹಾಗೂ ವೀನಸ್ ಶನಿವಾರ ನಡೆಯಲಿರುವ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.
ಮೆಲ್ಬೋರ್ನ್ ಪಾರ್ಕ್‌ನಲ್ಲಿ ವೀನಸ್ ಹಾಗೂ ಸೆರೆನಾ 1998ರ ಟೂರ್‌ಮ್ಯಾಚ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದರು. ಸುಮಾರು 20 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ವಿಶ್ವ ಟೆನಿಸ್‌ನ ಶ್ರೇಷ್ಠ ಆಟಗಾರ್ತಿಯರು ಮತ್ತೊಂದು ಅಧ್ಯಾಯ ಬರೆಯಲು ಮುಂದಾಗಿದ್ದಾರೆ.
ಸೆರೆನಾ ಶನಿವಾರ ವೃತ್ತಿಜೀವನದಲ್ಲಿ 23ನೆ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸುವ ಮೂಲಕ ಜರ್ಮನಿಯ ಸ್ಟೆಫಿಗ್ರಾಫ್(22 ಪ್ರಶಸ್ತಿ) ದಾಖಲೆ ಮುರಿಯುವ ಕನಸು ಕಾಣುತ್ತಿದ್ದಾರೆ. ಮತ್ತೊಂದೆಡೆ ವೀನಸ್ 9 ವರ್ಷಗಳ ಬಳಿಕ ಮೊದಲ ಬಾರಿ 8ನೆ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದ್ದಾರೆ.
ಸೆರೆನಾ ಕಳೆದ ವರ್ಷ 7ನೆ ಬಾರಿ ವಿಂಬಲ್ಡನ್ ಟ್ರೋಫಿ ಜಯಿಸುವುದರೊಂದಿಗೆ ಸ್ಟೆಫಿಗ್ರಾಫ್‌ರ 22 ಪ್ರಶಸ್ತಿ ದಾಖಲೆಯನ್ನು ಸರಿಗಟ್ಟಿದ್ದರು. ಸೆರೆನಾ ಮೆಲ್ಬೋರ್ನ್ ಪಾರ್ಕ್‌ನಲ್ಲಿ 7ನೆ ಪ್ರಶಸ್ತಿ ಗೆದ್ದುಕೊಂಡರೆ ಸಾರ್ವಕಾಲಿಕ ಶ್ರೇಷ್ಠ ಸಾಧನೆ ಮಾಡುತ್ತಾರೆ.
ಆಸ್ಟ್ರೇಲಿಯದ ಮಾರ್ಗರೆಟ್ ಕೋರ್ಟ್(24 ಪ್ರಶಸ್ತಿ) ದಾಖಲೆ ಸರಿಗಟ್ಟುವತ್ತ ಹೆಜ್ಜೆ ಇಡಲಿದ್ದಾರೆ. ಮಾರ್ಗರೆಟ್ ಅಮೆಚೂರ್ ಹಾಗೂ ವೃತ್ತಿಪರ ಯುಗದಲ್ಲಿ ಒಟ್ಟು 24 ಪ್ರಶಸ್ತಿಯನ್ನು ಜಯಿಸಿದ್ದರು. ಈ ಹಿನ್ನೆಲೆಯಲ್ಲಿ ಸೆರೆನಾ ಸಾಧನೆಯೇ ಅಮೋಘವಾಗಲಿದೆ.
ಶನಿವಾರ ವೀನಸ್ ಸಹೋದರಿಯರು 9ನೆ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್ ಕಣದಲ್ಲಿ ಸೆಣಸಾಡಲಿದ್ದಾರೆ. 2009ರ ವಿಂಬಲ್ಡನ್ ಟೂರ್ನಿಯ ಬಳಿಕ ಇವರಿಬ್ಬರು ಮೊದಲ ಬಾರಿ ಮುಖಾಮುಖಿಯಾಗುತ್ತಿದ್ದಾರೆ.
ಮ್ಯಾಟೆಕ್ಸ್ಯಾಂಡ್ಸ್-ಸಫರೋವಾ ಮುಡಿಗೆ ಡಬಲ್ಸ್ ಕಿರೀಟ
ಮೆಲ್ಬೋರ್ನ್, ಜ.27: ಅಮೆರಿಕದ ಬೆಥಾನಿ ಮ್ಯಾಟೆಕ್-ಸ್ಯಾಂಡ್ಸ್ ಹಾಗೂ ಝೆಕ್‌ನ ಲೂಸಿ ಸಫರೋವಾ ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ದ್ವಿತೀಯ ಶ್ರೇಯಾಂಕಿತ ಜೋಡಿ ಮ್ಯಾಟೆಕ್-ಸ್ಯಾಂಡ್ಸ್-ಸಫರೋವಾ ಶುಕ್ರವಾರ ರೋಚಕವಾಗಿ ನಡೆದ ಮಹಿಳೆಯರ ಡಬಲ್ಸ್‌ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಝೆಕ್‌ನ ಆ್ಯಂಡ್ರಿಯ ಹ್ಲಾವಾಕೋವಾ ಹಾಗೂ ಚೀನಾದ ಪೆಂಗ್ ಶುಐ ಅವರನ್ನು 6-7(3), 6-3, 6-3 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
ಈ ಗೆಲುವಿನೊಂದಿಗೆ ಈ ಜೋಡಿ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಅಜೇಯ ಗೆಲುವಿನ ದಾಖಲೆಯನ್ನು 12 ಪಂದ್ಯಗಳಿಗೆ ವಿಸ್ತರಿಸಿತು. ಮ್ಯಾಟೆಕ್-ಸ್ಯಾಂಡ್ಸ್-ಸಫರೋವಾ 2015ರಲ್ಲಿ ತಮ್ಮ ಚೊಚ್ಚಲ ಡಬಲ್ಸ್ ಪಂದ್ಯದಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಜಯಿಸಿತ್ತು. ಸಫರೋವಾ ಅಸೌಖ್ಯದಿಂದ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದ ಕಾರಣ ಕಳೆದ ವರ್ಷದ ಈ ಜೋಡಿ ಒಟ್ಟಿಗೆ ಆಡಿರಲಿಲ್ಲ.
ಎರಡನೆ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಡಬಲ್ಸ್ ಪ್ರಶಸ್ತಿಯನ್ನು ಜಯಿಸಿರುವ ಮ್ಯಾಟೆಕ್ ಸ್ಯಾಂಡ್ಸ್-ಸಫರೋವಾ ಒಟ್ಟಾರೆ ನಾಲ್ಕನೆ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡರು. ಈ ಜೋಡಿ 2015ರ ಫ್ರೆಂಚ್ ಓಪನ್ ಹಾಗೂ ಕಳೆದ ವರ್ಷ ಯುಎಸ್ ಓಪನ್ ಪ್ರಶಸ್ತಿಯನ್ನು ಜಯಿಸಿದೆ. ವರ್ಷದ ಮೊದಲ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸಿರುವ ಮ್ಯಾಟೆಕ್ ಸ್ಯಾಂಡ್ಸ್-ಸಫರೋವಾ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ. ಮ್ಯಾಟೆಕ್-ಸ್ಯಾಂಡ್ಸ್ ನಂ.1 ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡರೆ, ಸಫರೋವಾ ಜೀವನಶ್ರೇಷ್ಠ ದ್ವಿತೀಯ ಸ್ಥಾನ ತಲುಪಿದ್ದಾರೆ. ಈ ಜೋಡಿ ಬಹುಮಾನ ಮೊತ್ತ 660,000 ಆಸ್ಟ್ರೇಲಿಯನ್ ಡಾಲರ್‌ನ್ನು(500,000 ಯುಎಸ್ ಡಾಲರ್) ಹಂಚಿಕೊಂಡಿತು.
‘‘ನಾವಿಬ್ಬರು 5 ವರ್ಷದ ಮಕ್ಕಳಂತೆ ಪ್ರಶಸ್ತಿ ಗೆಲುವಿನ ಸಂಭ್ರಮ ಆಚರಿಸಿಕೊಂಡೆವು. ನಾವು ಟ್ರೋಫಿ ಪಡೆದಾಗ, ಅದರಲ್ಲಿ ನಮ್ಮ ಹೆಸರನ್ನು ನೋಡಿದಾಗ ಅದು ನಮಗೆ ಮತ್ತೊಮ್ಮೆ ವಿಶೇಷವೆನಿಸಿತು. ನಾವಿಬ್ಬರೂ ಆಕ್ರಮಣಕಾರಿ ಹಾಗೂ ರಂಜನೀಯ ಪ್ರದರ್ಶನ ನೀಡಿದ್ದೇವೆ. ನಮ್ಮಿಬ್ಬರ ಆಟದಲ್ಲಿ ಸಮತೋಲನವಿತ್ತು’’ ಎಂದು ಮ್ಯಾಟೆಕ್-ಸ್ಯಾಂಡ್ಸ್ ಹೇಳಿದ್ದಾರೆ.
ಕನಿಷ್ಠ ಎರಡು ಗ್ರಾನ್‌ಸ್ಲಾಮ್ ಪ್ರಶಸ್ತಿ ವಿಜೇತ ನಾಲ್ವರು ಆಟಗಾರರು ಇದೇ ಮೊದಲ ಬಾರಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. ಹ್ಲಾವಾಕೋವಾ ಹಾಗೂ ಪೆಂಗ್ ಫೈನಲ್ ಹಾದಿಯಲ್ಲಿ ಒಂದೂ ಸೆಟ್‌ನ್ನು ಕಳೆದುಕೊಂಡಿರಲಿಲ್ಲ. ಮೊದಲ ಸೆಟ್‌ನಲ್ಲಿ ಮುನ್ನಡೆ ಪಡೆದು ಮೇಲುಗೈ ಸಾಧಿಸುವ ಸೂಚನೆ ನೀಡಿದ್ದರು. ಆದರೆ, ಮ್ಯಾಟೆಕ್‌ಸ್ಯಾಂಡ್ಸ್ ಹಾಗೂ ಸಫರೋವಾ ಸಂದರ್ಭೊಚಿತವಾಗಿ ಆಡಲು ಸಫಲರಾದರು.
ಆಸ್ಟ್ರೇಲಿಯನ್ ಓಪನ್: ಫೆಡರರ್‌ಗೆ ನಡಾಲ್ ಎದುರಾಳಿ
ಮೆಲ್ಬೋರ್ನ್, ಜ.27: ಸ್ಪೇನ್‌ನ ಸೂಪರ್ ಸ್ಟಾರ್ ರಫೆಲ್ ನಡಾಲ್ ಐದು ಸೆಟ್‌ಗಳ ಅಂತರದಿಂದ ಜಯ ಸಾಧಿಸಿ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್‌ನ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ನಡಾಲ್ ಅವರು ರವಿವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸ್ವಿಸ್ ದಂತಕತೆ ರೋಜರ್ ಫೆಡರರ್‌ರನ್ನು ಎದುರಿಸಲಿದ್ದಾರೆ.
ಇಲ್ಲಿ ಶುಕ್ರವಾರ 4 ಗಂಟೆ, 56 ನಿಮಿಷಗಳ ಕಾಲ ನಡೆದ ಎರಡನೆ ಸೆಮಿ ಫೈನಲ್‌ನಲ್ಲಿ ನಡಾಲ್ ಅವರು ಬೆಲ್ಜಿಯಂನ ಗ್ರಿಗೊರ್ ಡಿಮಿಟ್ರೇವ್‌ರನ್ನು 6-3, 5-7, 7-6(7/5), 6-7(4/7), 6-4 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಟೆನಿಸ್ ದಿಗ್ಗಜರ ನಡುವಿನ ಫೈನಲ್ ಪಂದ್ಯ ವೀಕ್ಷಿಸಲು ವಿಶ್ವದ ಟೆನಿಸ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಇಬ್ಬರು ಹಿರಿಯ ಆಟಗಾರರ ಪೈಕಿ ಯಾರಿಗೆ ಪ್ರಶಸ್ತಿ ಒಲಿಯಲಿದೆ ಎಂದು ರವಿವಾರ ಗೊತ್ತಾಗಲಿದೆ.







