ಮುಲ್ಕಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆ ಶೀಘ್ರದಲ್ಲಿ ಪರಿಹಾರ : ಸಂಸದ ನಳಿನ್ ಕುಮಾರ್ ಕಟೀಲ್

ಮುಲ್ಕಿ, ಜ.27: ರಾಷ್ಟ್ರೀಯ ಹೆದ್ದಾರಿ ಮುಲ್ಕಿ ಪೇಟೆಯಲ್ಲಿ ಅರ್ಧದಲ್ಲಿ ಉಳಿದಿರುವ ಸರ್ವಿಸ್ ರಸ್ತೆ ಕಾಮಗಾರಿ, ಮುಲ್ಕಿ- ಕಿನ್ನಿಗೋಳಿ ಸಂಪರ್ಕ ರಸ್ತೆ ಸಮಸ್ಯೆ ನಿವಾರಣೆ , ಮುಲ್ಕಿ, ಹಳೆಯಂಗಡಿ, ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೈ ಮಾಸ್ಕ್ ದೀಪ ಅಳವಡಿಕೆ, ಮುಲ್ಕಿಯ ಬಪ್ಪನಾಡು ಸೇತುವೆ ಬಳಿ ದ.ಕ. ಜಿಲ್ಲೆಗೆ ಸ್ವಾಗತ ಹಾಗೂ ಮುಲ್ಕಿ ಹೆಸರಿನ ನಾಮಫಲಕ ಅಳವಡಿಕೆ, ಸೇರಿದಂತೆ ಹೆದ್ದಾರಿ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮುಲ್ಕಿ ಪೇಟೆಯಲ್ಲಿನ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳ ಬಗ್ಗೆ ಮುಲ್ಕಿಗೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಮುಲ್ಕಿಯಲ್ಲಿ ಈಗ ಅರ್ಧದಲ್ಲಿ ಬಿಟ್ಟಿರುವ ಸರ್ವಿಸ್ ರಸ್ತೆಗಳನ್ನು ಕೂಡಲೇ ಸಂಪೂರ್ಣಗೊಳಿಸುವಂತೆ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಕೆಲವೊಂದು ತಾಂತ್ರಿಕ ದೋಷಗಳಿಂದಾಗಿ ಅನುಮೋದನೆ ಕಷ್ಟವಿದ್ದು, ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಅವರು ತಿಳಿಸಿದರು.
ಮುಲ್ಕಿಯ ಸಮಸ್ಯೆಗಳ ಬಗ್ಗೆ ಮಾತನಾಡಿದ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ, ಮುಲ್ಕಿ ಪೇಟೆಯಲ್ಲಿ ವಿಜಯ ಬ್ಯಾಂಕ್ ಎದುರುಗಡೆ, ಬಸ್ಸು ನಿಲ್ದಾಣದ ಬಳಿ ಹಾಗೂ ಬಪ್ಪನಾಡು ದೇವಳದ ಎದುರುಭಾಗದಲ್ಲಿ ಕ್ರಾಸಿಂಗ್ ನೀಡಿದ್ದು ಇದರಿಂದ ಹೆಚ್ಚಿನ ಅಪಘಾತಗಳಾಗುತ್ತಿವೆ. ಮುಲ್ಕಿಯ ವಿಜಯ ಬ್ಯಾಂಕ್ ಎದುರುಗಡೆ ಮತ್ತು ಮುಲ್ಕಿಯ ಬಸ್ಸು ನಿಲ್ದಾಣದ ಬಳಿಯ ಆರಾರ್ ಟವರ್ ಎದುರುಗಡೆ ಕ್ರಾಸಿಂಗ್ ನೀಡಲು ತಿಳಿಸಿದರು. ಮುಲ್ಕಿಯ ಬಪ್ಪನಾಡು ದೇವಳದ ಎದುರುಗಡೆ ಕ್ರಾಸಿಂಗ್ ಗೆ ಗೇಟು ಅಳವಡಿಸಿ ದೇವಳದ ಜಾತ್ರಾ ಮಹೋತ್ಸವದ ಸಂದಭರ್ದಲ್ಲಿ ತೆರವು ಗೊಳಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಮುಲ್ಕಿ ಪೇಟೆಯಲ್ಲಿ ಹೆದ್ದಾರಿ ಇಲಾಖೆಯ ವಶಪಡಿಸಿಕೊಂಡಿರುವ 45 ಮೀಟರ್ ಅಗಲ ಭೂಮಿಯನ್ನು ಸ್ವಾಧೀನಪಡಿಸಿ ರಸ್ತೆ ನಿರ್ಮಿಸಿ ಉಳಿದ ಜಾಗವನ್ನು ಸಮತಟ್ಟುಗೊಳಿಸಿ ನೀಡಿದಲ್ಲಿ ಪಾರ್ಕಿಂಗ್ ವ್ಯವಸ್ತೆ ಮಾಡಲು ಸಾಧ್ಯವೆಂದು ತಿಳಿಸಿದರು. ಮೂಲ್ಕಿಯಲ್ಲಿ ಹೆದ್ದಾರಿ ನಿರ್ಮಾಣ ಸಂದರ್ದಲ್ಲಿ ಅಂಡರ್ ಪಾಸ್ ಮಾಡುವುದಾಗಿ ತಿಳಿಸಿದ್ದು ಕಾರ್ಯಗತಗೊಂಡಿಲ್ಲ, ಕನಿಷ್ಠ ಮೂಲ್ಕಿ ಪೇಟೆಯಲ್ಲಿ ಸ್ಕೈ ವಾಕ್ ನಿರ್ಮಿಸುವಂತೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಪಡುಪಣಂಬೂರು,ಹಳೆಯಂಗಡಿ, ಮೂಲ್ಕಿಯಲ್ಲಿ ಹೆದ್ದಾರಿಯಲ್ಲಿ ಮಾಸ್ಕ್ ದೀಪ ಅಳವಡಿಕೆ ಬಗ್ಗೆ ಪಡುಪಣಂಬೂರಿನ ವಿನೋದ್ ಸಾಲ್ಯಾನ್ ಸಂಸದಸರಿಗೆ ಮನವಿ ಸಲ್ಲಿಸಿದರು. ಮೂಲ್ಕಿಯ ನಾಮಪಲಕ ಅಳವಡಿಕೆ,ಮೂಲ್ಕಿಯ ಬಪ್ಪನಾಡು ಸೇತುವೆ ಬಳಿ ದ.ಕ.ಜಿಲ್ಲೆಗೆ ಸ್ವಾಗತ ನಾಮ ಪಲಕ ಅಳವಡಿಕೆ ಬಗ್ಗೆ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.
ಮುಲ್ಕಿಯಿಂದ ಕಿನ್ನಿಗೋಳಿಗೆ ಹೋಗುವ ಹಾಗೂ ಬರುವ ವಾಹನಗಳಿಗೆ ಹೆದ್ದಾರಿ ಕ್ರಾಸಿಂಗ್ ಸಮಸ್ಯೆಯಾಗಿದ್ದು ಸರ್ವಿಸ್ ರಸ್ತೆ ಅಗಲಗೊಳಿಸಿ ವ್ಯವಸ್ತೆ ಮಾಡುವಂತೆ ಹಾಗೂ ಸರ್ವಿಸ್ ರಸ್ತೆಯನ್ನು ಬಪ್ಪನಾಡು ದೇವಳದ ದ್ವಾರದವರೆಗೆ ವಿಸ್ತರಿಸುವಂತೆ ಮತ್ತು ಮುಲ್ಕಿ ತಾತ್ಕಾಲಿಕ ಬಸ್ಸು ನಿಲ್ದಾಣ ರಚಿಸುವಂತೆ ನ.ಪಂ. ಅಧ್ಯಕ್ಷ ಸುನಿಲ್ ಆಳ್ವ ಸಂಸದರಿಗೆ ಒತ್ತಾಯಿಸಿದರು. ಮುಲ್ಕಿಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಶೀಘ್ರದಲ್ಲಿ ಆಗಲಿದ್ದು , ಹೆದ್ದಾರಿ ಎರಡು ಕಡೆಗಳಲ್ಲಿ 60 ಮೀಟರ್ ನ ಅಗತ್ಯವಿದೆ ಎಂದ ಸಂಸದರು , ಈಗ ಕೇವಲ 45 ಮೀಟರ್ ಸ್ವಾಧೀನಪಡಿಸಿದ್ದು ಇದರಿಂದ ಸಮಸ್ಯೆಯಾಗಿದೆ ಎಂದರು.
ತಾತ್ಕಾಲಿಕ ಬಸ್ಸು ನಿಲ್ದಾಣ, ಕಿನ್ನಿಗೋಳಿ ರಸ್ತೆ ಸಂಪರ್ಕ ಸೇರಿದಂತೆ ಸಮಸ್ಯೆಗಳನ್ನು ಬಗೆಹರಿಸಲಾಗುವುದೆಂದು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ವಿಜಯ ಕುಮಾರ್ ತಿಳಿಸಿದರು.
ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರ ಸಂಸ್ಥೆ ನವಯುಗ್‌ನ ಅಧಿಕಾರಿ ಶಂಕರ್, ದ.ಕ.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಬೊಳ್ಳೂರು, ಮಾಜಿ ಸದಸ್ಯ ಈಶ್ವರ್ ಕಟೀಲು, ತಾಲೂಕು ಪಂಚಾಯತ್ ಸದಸ್ಯ ಜೀವನ್ ಪ್ರಕಾಶ್, ಪಡಪಣಂಬೂರು ಪಂಚಾಯತ್ ಪಂಚಾಯತ್ ಸದಸ್ಯ ವಿನೋದ್ ಸಾಲ್ಯಾನ್, ನವೀನ್‌ರಾಜ್, ರಂಗನಾಥ ಶೆಟ್ಟಿ, ಕಾರು ಮತ್ತು ರಿಕ್ಷಾ ಚಾಲಕ ಮಾಲಕ ಸಂಘದ ಸದಸ್ಯರು ಉಪಸ್ಥಿತರಿದ್ದರು.







