ಟಾಪ್ ಸಮಿತಿಗೆ ಅಭಿನವ್ ಬಿಂದ್ರಾ ಅಧ್ಯಕ್ಷ

ಹೊಸದಿಲ್ಲಿ, ಜ.27: ಬೀಜಿಂಗ್ ಒಲಿಂಪಿಕ್ಸ್ ಚಾಂಪಿಯನ್ ಅಭಿನವ್ ಬಿಂದ್ರಾ ಪುನರ್ರಚಿಸಲಾಗಿರುವ ಟಾರ್ಗೆಟ್ ಒಲಿಂಪಿಯನ್ ಪೋಡಿಯಂ(ಟಾಪ್) ಸಮಿತಿಯ ಅಧ್ಯಕ್ಷರಾಗಿ ಶುಕ್ರವಾರ ನೇಮಕಗೊಂಡಿದ್ದಾರೆ. ‘ಓಟದ ರಾಣಿ’ ಖ್ಯಾತಿಯ ಪಿ.ಟಿ.ಉಷಾ ಹಾಗೂ ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತದ ಮಾಜಿ ಶೂಟರ್ ಬಿಂದ್ರಾ ಈ ಹಿಂದೆ ಟಾಪ್ ಸಮಿತಿಯಲ್ಲಿದ್ದರು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ತಯಾರಿ ನಡೆಸುವ ಉದ್ದೇಶದಿಂದ ಟಾಪ್ ಸಮಿತಿಯನ್ನು ತೊರೆದಿದ್ದರು.
10 ಸದಸ್ಯರನ್ನು ಒಳಗೊಂಡ ಟಾಪ್ ಸಮಿತಿಯಲ್ಲಿ ಇನ್ನಿಬ್ಬರು ಕ್ರೀಡಾಪಟುಗಳಾದ ಶೂಟರ್ ಅಂಜಲಿ ಭಾಗವತ್ ಹಾಗೂ ಮಹಿಳಾ ವೇಟ್‌ಲಿಫ್ಟರ್, 2000ರ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕಂಚು ವಿಜೇತೆ ಕರ್ಣಂ ಮಲ್ಲೇಶ್ವರಿ ಅವರಿದ್ದಾರೆ.
ಸಮಿತಿಯಲ್ಲಿ ಅಖಿಲ ಭಾರತ ಟೆನಿಸ್ ಸಂಸ್ಥೆಯ ಆಜೀವ ಅಧ್ಯಕ್ಷ ಅನಿಲ್ ಖನ್ನಾ, ಬಾಕ್ಸಿಂಗ್ ಆಡಳಿತಾಧಿಕಾರಿ ಪಿ.ಕೆ. ಮುರಳೀಧರನ್ ರಾಜ, ರೈಲ್ವೇಸ್ ಸ್ಪೋರ್ಟ್ಸ್ ಪ್ರಮೋಶನ್ ಬೋರ್ಡ್ ಕಾರ್ಯದರ್ಶಿ ರೇಖಾ ಯಾದವ್, ಎಸ್‌ಎಸ್ ರಾಯ್, ಸಾಯ್ ಜೊತೆ ಕಾರ್ಯದರ್ಶಿ(ಕ್ರೀಡೆ) ಇಂದರ್ ಧಮಿಜಾ ಅವರಿದ್ದಾರೆ.
ಟಾಪ್ ಯೋಜನೆಯನ್ವಯ 2020 ಹಾಗೂ 2024ರ ಒಲಿಂಪಿಕ್ ಗೇಮ್ಸ್‌ನಲ್ಲಿ ಪದಕ ಗೆಲ್ಲಬಲ್ಲ ಅಥ್ಲೀಟ್‌ಗಳನ್ನು ಗುರುತಿಸಿ, ಪ್ರೋತ್ಸಾಹ ನೀಡುವುದು ಟಾಪ್ ಸಮಿತಿಯ ಮುಖ್ಯ ಗುರಿಯಾಗಿದೆ. 2016 ಹಾಗೂ 2020 ಒಲಿಂಪಿಕ್ ಗೇಮ್ಸ್‌ನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಿತಿ ರಚಿಸಲಾಗಿದೆ.
ಟಾಪ್ ಯೋಜನೆಯಡಿ ಆಯ್ದ ಅಥ್ಲೀಟ್‌ಗಳಿಗೆ ತರಬೇತಿ ನಡೆಸಲು ಹಣಕಾಸು ನೆರವು ನೀಡುವುದು ಹಾಗೂ ವಿಶ್ವ ದರ್ಜೆ ಸೌಲಭ್ಯ ಕಲ್ಪಿಸುವುದು ಹಾಗೂ ದೇಶಕ್ಕೆ ಪದಕ ಗೆಲ್ಲಲು ಪ್ರದರ್ಶನದ ಮಟ್ಟ ಹೆಚ್ಚಿಸಲು ಅಗತ್ಯವಿರುವ ಬೆಂಬಲ ನೀಡಲಾಗುತ್ತದೆ.







