ಫೋನ್ ಇನ್ ಕಾರ್ಯಕ್ರಮದಲ್ಲಿ ದೂರಿನ ಸುರಿಮಳೆ

ಮಂಗಳೂರು, ಜ. 27: ಮಂಗಳೂರು ಪೊಲೀಸ್ ಕಮಿಷನರೆಟ್ ವತಿಯಿಂದ ನಡೆಯುತ್ತಿರುವ ಫೋನ್ ಇನ್ ಕಾರ್ಯಕ್ರಮದಲ್ಲಿ ಶುಕ್ರವಾರ 25 ಕರೆಗಳು ಸ್ವೀಕೃತವಾಗಿವೆ.
ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲು ನಿಲ್ದಾಣದಲ್ಲಿ ಕೆಲವು ರಿಕ್ಷಾ ಚಾಲಕರಿಂದ ಅಧಿಕ ಬಾಡಿಗೆ ದರ ವಸೂಲಿ, ಕಂಕನಾಡಿ ಕರಾವಳಿ ವೃತ್ತದಲ್ಲಿ ರಿಕ್ಷಾ ನಿಲುಗಡೆಯಿಂದಾಗಿ ಅಂಗಡಿಯವರಿಗೆ ಮತ್ತು ಪಾದಚಾರಿಗಳಿಗೆ ಸಮಸ್ಯೆ, ಸುರತ್ಕಲ್ ಗೋವಿಂದದಾಸ ಕಾಲೇಜು ಎದುರು ರಸ್ತೆಯಲ್ಲಿ ವಾಹನಗಳ ಅನಧಿಕೃತ ಪಾರ್ಕಿಂಗ್, ಬಸ್‌ಗಳಲ್ಲಿ ಕರ್ಕಶ ಹಾರ್ನ್, ಕೆಎಸ್ಸಾರ್ಟಿಸಿ-ಬಿಜೈ ರಸ್ತೆಯಲ್ಲಿ ವಾಹನಗಳ ಅನಧಿಕೃತ ನಿಲುಗಡೆ, ಕಳಪೆ ಗುಣಮಟ್ಟದ ಹೆಲ್ಮೆಟ್ ಮಾರಾಟ, ಕೆಲವು ರಿಕ್ಷಾಗಳಲ್ಲಿ ಡಬಲ್ ಹಾರ್ನ್ ಬಗ್ಗೆ ದೂರುಗಳು ಬಂದವು.
ಪಡೀಲ್ ಜಂಕ್ಷನ್‌ನಲ್ಲಿ ವೃತ್ತ ಇಲ್ಲದ ಕಾರಣ ವಾಹನ ಚಾಲಕರಿಗೆ ಗೊಂದಲದ ಸ್ಥಿತಿ ಉಂಟಾಗಿದೆ. ಏರ್‌ಪೋರ್ಟ್ ರಸ್ತೆಯಲ್ಲಿ ಕತ್ತಲೆಯ ವಾತಾವರಣವಿದೆ. ವಿಮಾನ ನಿಲ್ದಾಣದಲ್ಲಿ ವಾಹನಗಳ ನಿಲುಗಡೆಗೆ 7 ನಿಮಿಷಗಳ ಅವಕಾಶವಿದ್ದರೂ ಅದಕ್ಕಿಂತ ಮೊದಲೇ ಬಂದು ಶುಲ್ಕ ವಸೂಲಾತಿಗೆ ಕಿರುಕುಳ ನೀಡುವುದು, ಕೆಲವು ಕಡೆ ಪೊಲೀಸರಿಂದ ಸುಳ್ಳು ದೂರು ದಾಖಲು ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂತು. ಕಂಕನಾಡಿ ರೈಲು ನಿಲ್ದಾಣದಲ್ಲಿ ಪಾರ್ಕ್ ಮಾಡಿರುವ ಕೆಲವು ರಿಕ್ಷಾ ಚಾಲಕರು ಹಗಲು ಹೊತ್ತಿನಲ್ಲಿ ಕನಿಷ್ಟ ಬಾಡಿಗೆ 250 ರೂ. ಬೇಡಿಕೆ ಸಲ್ಲಿಸುತ್ತಿದ್ದಾರೆ ಎಂಬ ದೂರಿನ ಬಗ್ಗೆ ಪರಿಶೀಲಿಸಿ ಕ್ರಮ ಜರಗಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ತಿಳಿಸಿದರು.
25ನೆ ಕಾರ್ಯಕ್ರಮದಲ್ಲಿ ಡಿಸಿಪಿಗಳಾದ ಕೆ.ಎಂ. ಶಾಂತಾರಾಜು ಮತ್ತು ಡಾ. ಸಂಜೀವ್ ಎಂ. ಪಾಟೀಲ್, ಎಸಿಪಿ ವೆಲೆಂಟೈನ್ ಡಿ’ಸೋಜಾ, ಇನ್‌ಸ್ಪೆಕ್ಟರ್ ರಫೀಕ್ ಮತ್ತಿತರರು ಉಪಸ್ಥಿತರಿದ್ದರು.







