2019 ರ ವಿಶ್ವಕಪ್ ಗೆ ಪಾಕ್ ತಂಡ ಇಲ್ಲ !

ದುಬೈ, ಜ.28: ಇಂಗ್ಲೆಂಡ್‌ನಲ್ಲಿ 2019ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯುವುದರಿಂದ ಪಾಕಿಸ್ತಾನ ವಂಚಿತವಾಗುವ ಅಪಾಯದಲ್ಲಿದೆ. ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಏಕದಿನ ರ್ಯಾಂಕಿಂಗ್ ಬಿಡುಗಡೆಯಾದ ಬಳಿಕ ಇಂತಹದ್ದೊಂದು ಅನುಮಾನ ಕಾಡಲಾರಂಭಿಸಿದೆ.
ಪಾಕಿಸ್ತಾನ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ 89 ಅಂಕದೊಂದಿಗೆ 8ನೆ ಸ್ಥಾನದಲ್ಲಿದೆ. ಬಾಂಗ್ಲಾದೇಶಕ್ಕಿಂತ ಎರಡು ಅಂಕ ಹಿಂದಿದೆ. ಹಾಗೂ ವೆಸ್ಟ್‌ಇಂಡೀಸ್‌ಗಿಂತ ಎರಡು ಅಂಕ ಮುಂದಿದೆ.
ವಿಶ್ವಕಪ್ ಆತಿಥ್ಯವಹಿಸಿಕೊಂಡಿರುವ ಇಂಗ್ಲೆಂಡ್ ಹಾಗೂ 2017ರ ಸೆಪ್ಟಂಬರ್ 30ಕ್ಕಿಂತ ಮೊದಲು ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಅಗ್ರ-7ರೊಳಗೆ ಸ್ಥಾನ ಪಡೆಯುವ ತಂಡಗಳು 2019ರ ಮೇ 30 ರಿಂದ ಜು.15ರ ತನಕ ನಡೆಯಲಿರುವ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಲು ಅರ್ಹತೆ ಪಡೆಯುತ್ತವೆ. 2019ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ನೇರ ಪ್ರವೇಶ ಪಡೆಯುವ ನಿಟ್ಟಿಯಲ್ಲಿ ತನ್ನ ಅಂಕದ ಪ್ರಗತಿಯಲ್ಲಿ ಪಾಕಿಸ್ತಾನ ಗಮನ ನೀಡಿದಂತೆ ಕಾಣುತಿಲ್ಲ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಪಾಕಿಸ್ತಾನ ಫೆಬ್ರವರಿಯಲ್ಲಿ ಯುಎಇನಲ್ಲಿ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್, 3 ಏಕದಿನ ಹಾಗೂ ಟ್ವೆಂಟಿ-20 ಟೂರ್ನಮೆಂಟ್‌ನ ಆತಿಥ್ಯವಹಿಸಿಕೊಂಡಿದೆ.





