ಬಜೆಟ್ ದಿನದಂದು ವಿತ್ತಸಚಿವರು ಬ್ರೀಫ್‌ಕೇಸ್ ಜೊತೆ ಕಾಣಿಸಿಕೊಳ್ಳುವುದೇಕೆ...ಗೊತ್ತೇ?

ಹೊಸದಿಲ್ಲಿ,ಜ.28: ವಿತ್ತ ಸಚಿವರು ಪ್ರತಿ ವರ್ಷ ಸಂಸತ್ತಿನಲ್ಲಿ ಬಜೆಟ್ ಭಾಷಣಕ್ಕೆ ಮುನ್ನ ಬ್ರೀಫ್‌ಕೇಸ್‌ನೊಂದಿಗೆ ಕಾಣಿಸಿಕೊಳ್ಳುವುದೇಕೆಂದು ಅಚ್ಚರಿಯೇ? ಇದಕ್ಕೆ ಉತ್ತರ ‘ಬಜೆಟ್’ ಶಬ್ದದಲ್ಲಿಯೇ ಅಡಗಿದೆ. ಇದರ ಮೂಲ ಫ್ರೆಂಚ್ ಶಬ್ದ ‘ಬ್ಯುಗೆಟ್’ ಆಗಿದ್ದು, ಅದರ ಅರ್ಥ ಚರ್ಮದ ಚೀಲ ಎಂದಾಗಿದೆ.
18ನೆಯ ಶತಮಾನದಲ್ಲಿ ಮೊದಲ ಬಾರಿಗೆ ಚಾನ್ಸಲರ್ ಆಫ್ ಎಕ್ಸಚೆಕರ್ ಅಥವಾ ಬ್ರಿಟನ್ನಿನ ಬಜೆಟ್ ಮುಖ್ಯಸ್ಥರಿಗೆ, ಅವರು ವಾರ್ಷಿಕ ಆಯವ್ಯಯವನ್ನು ಮಂಡಿಸುತ್ತಿದ್ದಾಗ ‘ಓಪನ್ ದಿ ಬಜೆಟ್’ ಎಂದು ಸೂಚಿಸಲಾಗಿತ್ತು. 1860ರಲ್ಲಿ ತನ್ನ ಸುದೀರ್ಘ ಭಾಷಣಗಳಿಗಾಗಿ ಹೆಸರಾಗಿದ್ದ ಆಗಿನ ಬ್ರಿಟಿಷ್ ಬಜೆಟ್ ಮುಖ್ಯಸ್ಥ ವಿಲಿಯಂ ಇ.ಗ್ಲಾಡ್‌ಸ್ಟೋನ್ ಅವರು ತನ್ನ ಬಜೆಟ್ ದಾಖಲೆಗಳನ್ನು ಹೊತ್ತೊಯ್ಯಲು ರಾಣಿಯ ಮೊನೊಗ್ರಾಮ್‌ನ ಚಿನ್ನದ ಉಬ್ಬುಚಿತ್ರವಿದ್ದ ಕೆಂಪು ಸೂಟ್‌ಕೇಸ್ ಬಳಸಿದ್ದರು.
ಬಜೆಟ್ ದಿನದಂದು ಭಾರತೀಯ ವಿತ್ತಸಚಿವರು ಸಂಸತ್ತಿನ ಹೊರಗೆ ಬ್ರೀಫ್‌ಕೇಸ್ ಹಿಡಿದುಕೊಂಡು ಕ್ಯಾಮರಾಗಳಿಗೆ ಭಂಗಿ ನೀಡುವಂತೆ ಬ್ರಿಟನ್ನಿನ ಬಜೆಟ್ ಮುಖ್ಯಸ್ಥರೂ ಬಜೆಟ್ ಭಾಷಣ ಮಾಡಲು ಸಂಸತ್ತಿನತ್ತ ಹೆಜ್ಜೆಗಳನ್ನು ಹಾಕುವ ಮುನ್ನ ನಂ.11, ಡೌನಿಂಗ್ ಸ್ಟ್ರೀಟ್‌ನೆದುರು ತನ್ನ ಪುಟ್ಟ ಸೂಟ್‌ಕೇಸ್‌ನ್ನು ಹಿಡಿದುಕೊಂಡು ಕ್ಯಾಮರಾಗಳಿಗೆ ಭಂಗಿಯನ್ನು ನೀಡುತ್ತಾರೆ.
ಭಾರತದ ಬಜೆಟ್ ಬ್ಯಾಗ್ ಪ್ರತಿವರ್ಷ ವಿಭಿನ್ನ ಬಣ್ಣ ಮತ್ತು ಗಾತ್ರವನ್ನು ಹೊಂದಿರುತ್ತದೆಯಾದರೂ ಅದು 1860ರಿಂದಲೂ ಪ್ರತಿಯೊಂದು ಬ್ರಿಟಿಷ್ ಬಜೆಟ್ ಮಂಡನೆಯ ಸಂದರ್ಭ ಬಳಸಲಾಗಿದ್ದ ಕೆಂಪು ಗ್ಲಾಡ್‌ಸ್ಟೋನ್ ಬ್ಯಾಗನ್ನೇ ಹೋಲುತ್ತದೆ. 2010ರಲ್ಲಿ ಬ್ರಿಟನ್ನಿನ ಈ ಗ್ಲಾಡ್‌ಸ್ಟೋನ್ ಬ್ಯಾಗು ಎಷ್ಟೊಂದು ಹಳೆಯದಾಗಿ ಬಣ್ಣ ಕಳೆದುಕೊಂಡಿತ್ತೆಂದರೆ ಅದಕ್ಕೆ ‘ಅಧಿಕೃತ ನಿವೃತ್ತಿ ’ಯನ್ನು ಘೋಷಿಸಲಾಗಿತ್ತು.
ಇದೊಂದು ನಮ್ಮ ಸರಕಾರಗಳು ಮೈಗೂಡಿಸಿಕೊಂಡಿರುವ ಬ್ರಿಟಿಷ್ ರಾಜ್‌ನ ಪಳೆಯುಳಿಕೆೆಯಂತೆ ಕಂಡುಬಂದರೂ ಈ ಪುಟ್ಟಬ್ಯಾಗ್‌ನಲ್ಲಿರುವ ಕಾಗದಪತ್ರಗಳು ಭವಿಷ್ಯದ ವರ್ಷಗಳಲ್ಲಿ ದೇಶದ ಆರ್ಥಿಕ ಪ್ರಗತಿಗೆ ಮಾರ್ಗದರ್ಶನ ನೀಡುತ್ತವೆ.
ಭಾರತದಲ್ಲಿ ಬಜೆಟ್ ಮಂಡನೆ ದಿನದಂದು ಬ್ರೀಫ್‌ಕೇಸ್ ಹೊತ್ತೊಯ್ಯುವ ಪರಂಪರೆ 1947,ನ.26ರಂದು ಆಗಿನ ವಿತ್ತ ಸಚಿವ ಆರ್.ಕೆ.ಷಣ್ಮುಖಂ ಚೆಟ್ಟಿ ಅವರು ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡಿಸಿದಾಗಲೇ ಆರಂಭಗೊಂಡಿತ್ತು.
1998-99ರ ಬಜೆಟ್ ಸಂದರ್ಭ ವಿತ್ತಸಚಿವ ಯಶವಂತ ಸಿನ್ಹಾ ಅವರು ಸ್ಟ್ರಾಪ್‌ಗಳು ಮತ್ತು ಬಕಲ್‌ಗಳಿದ್ದ ಕಪ್ಪುಬಣ್ಣದ ಚರ್ಮದ ಬ್ಯಾಗ್ ಬಳಸಿದ್ದರು. ಮಾಜಿ ಪ್ರಧಾನಿ ಮನಮೋಹನ ಸಿಂಗ ಅವರು 1991ರಲ್ಲಿ ಪಿ.ವಿ.ನರಸಿಂಹರಾವ್ ಸರಕಾರದಲ್ಲಿ ವಿತ್ತ ಸಚಿವರಾಗಿ ತನ್ನ ಪ್ರಸಿದ್ಧ ಬಜೆಟ್ ಮಂಡಿಸಿದಾಗ ಸಾದಾ ಕಪ್ಪುಬಣ್ಣದ ಬ್ಯಾಗ್ ಬಳಸಿದ್ದರು.
ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಯುಪಿಎ ಆಡಳಿತದಲ್ಲಿ ವಿತ್ತ ಸಚಿವರಾಗಿದ್ದಾಗ ಬ್ರಿಟನ್ನಿನ ಗ್ಲಾಡ್‌ಸ್ಟೋನ್ ಬ್ಯಾಗ್‌ನ್ನೇ ಹೋಲುತ್ತಿದ್ದ ಕೆಂಪು ಬ್ಯಾಗ್‌ನೊಂದಿಗೆ ಸಂಸತ್ತಿಗೆ ಆಗಮಿಸಿದ್ದರು.
ವರ್ಷಗಳು ಉರುಳಿದಂತೆ ನಮ್ಮ ವಿತ್ತಸಚಿವರ ಬಜೆಟ್ ಬ್ಯಾಗ್‌ಗಳು ವಿವಿಧ ಬಣ್ಣಗಳಲ್ಲಿದ್ದವಾದರೂ ಆಕಾರ ಮಾತ್ರ ಹೆಚ್ಚುಕಡಿಮೆ ಒಂದೇ ರೀತಿಯಲ್ಲಿದೆ. ಹಾಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಹಿಂದಿನ ಎರಡು ಬಜೆಟ್ ಮಂಡನೆ ಸಂದರ್ಭಗಳಲಿ ಬಳಸಿದ್ದ ಬ್ಯಾಗ್‌ಗಳು ಮಾಜಿ ವಿತ್ತಸಚಿವ ಪಿ.ಚಿದಂಬರಂ ಅವರು ಬಳಸಿದ್ದ ಬ್ಯಾಗ್‌ನ್ನು ಹೋಲುತ್ತಿದ್ದವು.
ಬಜೆಟ್ ಭಾಷಣ ಮಾಡುವಾಗ ಬ್ರೀಫ್ ಕೇಸ್‌ನ್ನು ಹೊತ್ತೊಯ್ಯುವುದು ನಮ್ಮ ವಿತ್ತ ಸಚಿವರ ರಿವಾಜು ಆಗಿಬಿಟ್ಟಿದೆ. ಬಂದ್‌ಗಲಾ ಮತ್ತು ನೆಹರು ಜಾಕೆಟ್ ಭಾರತೀಯ ರಾಜಕಾರಣದ ಅವಿಭಾಜ್ಯ ಅಂಗವಾಗಿರುವಂತೆ ಈ ಬ್ರೀಫ್‌ಕೇಸ್ ಕೂಡ ಬಜೆಟ್‌ನ ಅಂಗವಾಗಿರುವಂತಿದೆ.

(ಟ್ರೇಡ್‌ಮಾರ್ಕ್ ಬ್ಯಾಗ್ ಹಿಡಿದುಕೊಂಡಿರುವ ಭಾರತದ ಮೊದಲ ವಿತ್ತಸಚಿವ ಆರ್‌ಕೆ.ಷಣ್ಮುಖಂ ಚೆಟ್ಟಿ)







