ಫೆ.4: ಅಬ್ಬಕ್ಕ ಕ್ರೀಡೋತ್ಸವ
ಮಂಗಳೂರು, ಜ.28: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಫೆ.4 ಮತ್ತು 5 ರಂದು ‘ವೀರರಾಣಿ ಅಬ್ಬಕ್ಕ ಉತ್ಸವ-2017’ಕ್ಕೆ ಪೂರ್ವಭಾವಿಯಾಗಿ ರಾಣಿ ಅಬ್ಬಕ್ಕ ಕ್ರೀಡೋತ್ಸವ ಫೆ.4 ರಂದು ಅಸೈಗೋಳಿ ವಿದ್ಯೋದಯ ಹಿ.ಪ್ರಾ. ಶಾಲೆಯಲ್ಲಿ ಏರ್ಪಡಿಸಲಾಗಿದೆ ಎಂದು ಸಮಿತಿಯ ಸಾಂಸ್ಕೃತಿಕ ಸಂಚಾಲಕರಾದ ಪಿ.ಡಿ. ಶೆಟ್ಟಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.4 ರಂದು ಬೆಳಗ್ಗೆ 8 ಕ್ಕೆ ಕ್ರೀಡೋತ್ಸವಕ್ಕೆ ಚಾಲನೆ ಸಿಗಲಿದೆ. ಸಚಿವ ಯು.ಟಿ. ಖಾದರ್ ಗೌರವ ವಂದನೆ ಸ್ವೀಕರಿಸಲಿದ್ದು, ಏಕಲವ್ಯ ಪ್ರಶಸ್ತಿ ವಿಜೇತೆ ಕ್ರೀಡಾಪಟು ಅಕ್ಷತಾ ಪೂಜಾರಿ ಕ್ರೀಡೋತ್ಸವಕ್ಕೆ ಚಾಲನೆ ನೀಡುವರು. ಮಾಂಡ್ ಸೋಭಾಣ್‌ನ ಎರಿಕ್ ಒಝಾರಿಯೋ ‘ರಾಣಿ ಅಬ್ಬಕ್ಕ ಕಲಾ ವೈಭವದ ಸಾಂಸ್ಕೃತಿಕ ಸ್ಪರ್ಧೆ’ಗೆ ಚಾಲನೆ ನೀಡುವರು. ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಗಣ್ಯರು ಭಾಗವಹಿಸಲಿದ್ದಾರೆ.
ಕ್ರೀಡೋತ್ಸವದಲ್ಲಿ ವೀರರಾಣಿ ಅಬ್ಬಕ್ಕ ಟ್ರೋಫಿಯಲ್ಲಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗೆ ಕಬಡ್ಡಿಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಕ್ರಮವಾಗಿ 7 ಸಾವಿರ ರೂ., 5 ಸಾವಿರ ರೂ., 3 ಸಾವಿರ ರೂ. ಮತ್ತು ವೀರರಾಣಿ ಅಬ್ಬಕ್ಕ ಟ್ರೋಫಿ ಮತ್ತು ಉತ್ತಮ ದಾಳಿಗಾರ್ತಿ, ಹಿಡಿತಗಾರ್ತಿ, ಸವ್ಯಸಾಚಿಗೆ ನಗದು ಮತ್ತು ಲಕ, ಮಹಿಳಾ ವಿಭಾಗದ ಥ್ರೋಬಾಲ್‌ನಲ್ಲಿ ಕ್ರಮವಾಗಿ 7,6 ಹಾಗೂ 3 ಸಾವಿರ ರೂ.ನಗದು ಮತ್ತು ಉತ್ತಮ ಎಸೆತಗಾರ್ತಿ, ಸವ್ಯಸಾಚಿಗೆ ನಗದು ಲಕವನ್ನೊಳಗೊಂಡಿದೆ.
ಸಾಂಸ್ಕೃತಿಕ ಸ್ಪರ್ಧಾ ವಿಜೇತ ತಂಡಗಳಿಗೆ ಕ್ರಮವಾಗಿ 25 ಸಾವಿರ, 20 ಸಾವಿರ, 15 ಸಾವಿರ ರೂ. ಹಾಗೂ ಆಯ್ದ ತಂಡಗಳಿಗೆ 3 ಸಾವಿರ ರೂ. ನಗದು ನೀಡಲಿದ್ದು ಸಂಜೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ಕ್ರೀಡಾ ಸಂಚಾಲಕ ಕೆ.ತಾರಾನಾಥ ರೈ, ಸಾಂಸ್ಕೃತಿಕ ಕಾರ್ಯಕ್ರಮದ ಸಂಚಾಲಕ ತೋನ್ಸೆ ಪುಷ್ಕಳ್ ಕುಮಾರ್, ಕಾರ್ಯದರ್ಶಿ ಧನಲಕ್ಷ್ಮಿ, ಸಂಚಾಲಕ ವಾಸುದೇವ ರಾವ್ ಉಪಸ್ಥಿತರಿದ್ದರು.







