ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲೇ ಖಡ್ಗಮೃಗ ಗಳಿಗೆ ಕುತ್ತು!

ಶಿಖರಗಳು ಮತ್ತು ದಟ್ಟ ಹುಲ್ಲುಗಾವಲಿನಿಂದ ಆವೃತವಾಗಿರುವ ಈ ತಾಣ ಖಡ್ಗಮೃಗಗಳ ಜೊತೆಗೆ ಅವುಗಳ ಪರಮಶತ್ರು, ಅವುಗಳನ್ನು ಕೊಂಬಿಗಾಗಿ ಬೇಟೆಯಾಡುವ ಮಾನವನಿಗೂ ಕೂಡಾ ನೆಲೆಸಲು ಅತ್ಯುತ್ತಮ ಪ್ರದೇಶವಾಗಿದೆ. ಕಳೆದ ತಿಂಗಳು ಒಂದರ ಹಿಂದೆ ಒಂದರಂತೆ ಎರಡು ಖಡ್ಗಮೃಗಗಳನ್ನು ಹತ್ಯೆ ಮಾಡಲಾಯಿತು, ಆ ಮೂಲಕ 2016ರಲ್ಲಿ ಹತ್ಯೆ ಮಾಡಲಾದ ಖಡ್ಗಮೃಗಗಳ ಸಂಖ್ಯೆ 18ಕ್ಕೇರಿತು. 2015ರಲ್ಲಿ 17 ಖಡ್ಗಮೃಗಗಳನ್ನು ಹತ್ಯೆ ಮಾಡಲಾಗಿತ್ತು.
ಭಾರತದ ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿ ತೀರದಲ್ಲಿ ದಟ್ಟನೆ ಹರಡಿರುವ ಆಳೆತ್ತರದ ಹುಲ್ಲುಗಳ, ಆಕಾಶದತ್ತ ಮುಖ ಮಾಡಿರುವ ಮರಗಳಿಂದ ಸುತ್ತವರಿದಿರುವ ಜಗತ್ತಿನ ಜೀವವೈವಿಧ್ಯತೆಯ ತಾಣ ಕಾಜಿರಂಗ ರಾಷ್ಟ್ರೀಯ ಉದ್ಯಾನವನವಿದೆ. ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣವೆಂದು ಪಟ್ಟಿ ಮಾಡಲಾಗಿರುವ ಕಾಜಿರಂಗ ಒಂಟಿ ಕೊಂಬಿನ ಖಡ್ಗಮೃಗಗಳ ಆವಾಸಸ್ಥಾನವಾಗಿದೆ. ಶಿಖರಗಳು ಮತ್ತು ದಟ್ಟ ಹುಲ್ಲುಗಾವಲಿನಿಂದ ಆವೃತವಾಗಿರುವ ಈ ತಾಣ ಖಡ್ಗಮೃಗಗಳ ಜೊತೆಗೆ ಅವುಗಳ ಪರಮಶತ್ರು, ಅವುಗಳನ್ನು ಕೊಂಬಿಗಾಗಿ ಬೇಟೆಯಾಡುವ ಮಾನವನಿಗೂ ಕೂಡಾ ನೆಲೆಸಲು ಅತ್ಯುತ್ತಮ ಪ್ರದೇಶವಾಗಿದೆ.
ಕಳೆದ ತಿಂಗಳು ಒಂದರ ಹಿಂದೆ ಒಂದರಂತೆ ಎರಡು ಖಡ್ಗಮೃಗಗಳನ್ನು ಹತ್ಯೆ ಮಾಡಲಾಯಿತು, ಆ ಮೂಲಕ 2016ರಲ್ಲಿ ಹತ್ಯೆ ಮಾಡಲಾದ ಖಡ್ಗಮೃಗಗಳ ಸಂಖ್ಯೆ 18ಕ್ಕೇರಿತು. 2015ರಲ್ಲಿ 17 ಖಡ್ಗಮೃಗಗಳನ್ನು ಹತ್ಯೆ ಮಾಡಲಾಗಿತ್ತು. ಸೆಂಬರ್ 22ರಂದು ಬೇಟೆಗಾರರು ಉದ್ಯಾನವನದ ಬಗೋರಿ ಪ್ರದೇಶದಲ್ಲಿ ಸುಮಾರು ಹತ್ತು ವರ್ಷ ಪ್ರಾಯದ ಗಂಡು ಘೇಂಡಾಮೃಗವನ್ನು ಹತ್ಯೆ ಮಾಡಿದ್ದರು. ಈ ಹತ್ಯೆಯು ಅಮ್ಕತೋನಿ ಮತ್ತು ದಫ್ಲಂಗ್ ಬೇಟೆ ನಿಗ್ರಹ ಶಿಬಿರದ ಸುತ್ತಮುತ್ತ ಮುಂಜಾನೆಯ ವೇಳೆ ನಡೆದಿತ್ತು.
ಗುಂಡಿನ ಸದ್ದು ಕೇಳಿಸುತ್ತಲೇ ಅರಣ್ಯರಕ್ಷಕರು ಶಬ್ದ ಬಂದ ಪ್ರದೇಶದತ್ತ ಓಡಿದರೂ ಅಷ್ಟರಲ್ಲಾಗಲೇ ಬೇಟೆಗಾರರು ಮೃಗದ ಕೊಂಬನ್ನು ಕತ್ತರಿಸಿ ತೆಗೆದು ದಟ್ಟ ಅರಣ್ಯದಲ್ಲಿ ಮಾಯವಾಗಿದ್ದರು. ನಂತರ ಅರಣ್ಯಾಧಿಕಾರಿಗಳು ಸತ್ತ ಪ್ರಾಣಿಯ ದೇಹವನ್ನು ಪಕ್ಕದಲ್ಲೇ ಇದ್ದ ಹೊಂಡದಲ್ಲಿ ಪತ್ತೆ ಮಾಡಿದ್ದರು. ಘಟನೆ ನಡೆದ ಸ್ಥಳವು ಉದ್ಯಾನವನದ ಮಧ್ಯೆಯೇ ಸಾಗುವ ರಾಷ್ಟ್ರೀಯ ಹೆದ್ದಾರಿ 37ರ ಐದು ಕಿ.ಮೀ ದೂರದಲ್ಲಿದ್ದು ಅಲ್ಲೇ ಅ.303 ಕ್ಯಾಲಿಬರ್ ರೈಫಲ್‌ನಿಂದ ಶೂಟ್ ಮಾಡಲಾದ ಬುಲೆಟ್ ಪತ್ತೆಯಾಗಿತ್ತು.

ಇದಕ್ಕೂ ಮೊದಲು ಡಿಸೆಂಬರ್ 14ರಂದು ಬುರಪಹರ್ ಪ್ರದೇಶದಲ್ಲಿ ಇದೇ ಮಾದರಿಯ ಘಟನೆ ನಡೆದಿತ್ತು. ಕೊಂಬು ಕೀಳಲಾದ ಒಂಬತ್ತು ವರ್ಷದ ಘೇಂಡಾಮೃಗದ ಮೃತದೇಹದ ಜೊತೆಗೆ ಅರಣ್ಯಾಧಿಕಾರಿಗಳು ಒಂದು ಡಜನ್‌ನಷ್ಟು ಎಕೆ-47 ರೈಫಲ್‌ನ ಉಪಯೋಗಿಸಿದ ಬುಲೆಟ್‌ಗಳನ್ನು ವಶಪಡಿಸಿಕೊಂಡಿದ್ದರು. ಈ ರೀತಿಯ ಆಧುನಿಕ ಶಸ್ತ್ರಗಳನ್ನು ಬಳಕೆ ಮಾಡಿರುವುದು ಈ ಘಟನೆಗಳಲ್ಲಿ ದಂಗೆಕೋರ ಸಂಘಟನೆಗಳು ಭಾಗಿಯಾಗಿರುವುದರತ್ತ ಬೊಟ್ಟು ಮಾಡುತ್ತದೆ ಮತ್ತು ಇದು ಬಹಳ ಚಿಂತೆಯ ವಿಷಯವಾಗಿದೆ.
ಯುಸಿಎನ್‌ನಿಂದ ಕೆಂಪು ಪಟ್ಟಿಗೆ ಸೇರಿಸಲಾಗಿರುವ ಒಂಟಿ ಕೊಂಬಿನ ಖಡ್ಗಮೃಗವು ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಚದರ ಕಿಲೋ ಮೀಟರ್‌ಗೆ 5.59 ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ, ಇದು ಜಗತ್ತಿನಲ್ಲೇ ಅತ್ಯಧಿಕವಾಗಿದೆ. 2015 ಘೇಂಡಾಮೃಗ ಗಣತಿಯಲ್ಲಿ 429 ಚದರ ಕಿಲೋ ಮೀಟರ್ ಉದ್ಯಾನವನದಲ್ಲಿ 2,401 ಖಡ್ಗಮೃಗಗಳಿರುವುದೆಂದು ಲೆಕ್ಕ ಹಾಕಲಾಗಿತ್ತು, ಈ ಸಂಖ್ಯೆ 2013ರಲ್ಲಿ 2,329 ಇತ್ತು. ಆದರೆ ಸಂರಕ್ಷಣೆಯ ಈ ಯಶಸ್ವಿ ಉದಾಹರಣೆಯ ನಂತರವೂ ಕಾಜಿರಂಗದಲ್ಲಿ ಖಡ್ಗಮೃಗಗಳು ಇನ್ನೂ ಬೇಟೆಗಾರರಿಂದ ಅಸುರಕ್ಷಿತವಾಗಿಯೇ ಇವೆ.
ಖಡ್ಗಮೃಗದ ಕೊಂಬಿಗೆ ಹೆಚ್ಚುತ್ತಿರುವ ಬೇಡಿಕೆ ಮುಖ್ಯವಾಗಿ ಅದನ್ನು ಸಾಂಪ್ರದಾಯಿಕ ಔಷಧ ಅಥವಾ ಘನತೆಯ ಚಿಹ್ನೆಯಾಗಿ ಬಳಸುವ ವಿಯೆಟ್ನಾಂ ಮತ್ತು ಚೀನಾ ದೇಶಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಈ ವ್ಯವಹಾರವನ್ನು ಹೆಚ್ಚು ಲಾಭದಾಯಕವನ್ನಾಗಿಸಿದೆ. ಹಾಗಾಗಿ ಪದೇಪದೆ ಬೇಟೆಗಾರರು ಖಡ್ಗಮೃಗಗಳ ತಾಣ ಕಾಜಿರಂಗದತ್ತ ಧಾವಿಸುತ್ತಾರೆ.

‘‘ಉದ್ಯಾನವನದ ಭೌಗೋಳಿಕ ಲಕ್ಷಣ ಕೂಡಾ ಇದಕ್ಕೆ ಕಾರಣವಾಗಿದೆ’’ ಎನ್ನುತ್ತಾರೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಕ್ಷೇತ್ರ ನಿರ್ದೇಶಕ ಸತ್ಯೇಂದ್ರ ಸಿಂಗ್. ಉತ್ತರದ ಗಡಿಯನ್ನು ಬ್ರಹ್ಮಪುತ್ರ ನದಿ ನಿರೂಪಿಸಿದರೆ ದಕ್ಷಿಣದ ಆವರಣವು ಕರ್ಬಿ ಆ್ಯಂಗ್ಲಾಂಗ್ ಬೆಟ್ಟಗಳಿಂದ ರೂಪಿಸಲ್ಪಟ್ಟಿದೆ. ಅತ್ಯಂತ ಉತ್ತರದ ಪ್ರದೇಶವನ್ನು ಬ್ರಹ್ಮಪುತ್ರ ನದಿಯ ಮೂಲಕ ಪ್ರವೇಶಿಸಬಹುದಾದರೆ ಉಳಿದ ಪ್ರದೇಶಗಳಿಗೆ ಕರ್ಬಿ ಬೆಟ್ಟಗಳ ಮೂಲಕ ಸುಲಭವಾಗಿ ಪ್ರವೇಶಿಸಬಹುದು ಮತ್ತು ಈ ಬೆಟ್ಟಗಳು ಬೇಟೆಗಾರರಿಗೆ ಉತ್ತಮ ಅಡಗುತಾಣಗಳನ್ನೂ ಒದಗಿಸುತ್ತವೆ. ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾದ ಅಸ್ಸಾಂ ಭೂಭಾಗ ಯೋಜನೆಯ ಮುಖ್ಯಸ್ಥರಾದ ಅನುಪಮ್ ಶರ್ಮಾ ಹೇಳುವಂತೆ ‘‘ಉದ್ಯಾನವನದಲ್ಲಿ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಖಡ್ಗಮೃಗಗಳ ಇರುವಿಕೆ ಮತ್ತು ಅದನ್ನು ಸುಲಭದಲ್ಲಿ ಬೇಟೆಯಾಡಬಹುದಾದ ಅವಕಾಶ ಈ ಪ್ರಾಣಿಗಳನ್ನು ಮತ್ತಷ್ಟು ಗಂಡಾಂತರಕ್ಕೆ ತಳ್ಳಿದೆ.’’
ಇನ್ನೊಂದೆಡೆಯಲ್ಲಿ ಶರ್ಮಾ ಈ ಪ್ರವೃತ್ತಿಯ ಆಸಕ್ತಿದಾಯಕ ಲಾಭದತ್ತಲೂ ಬೊಟ್ಟು ಮಾಡುತ್ತಾರೆ; ಘೇಂಡಾಮೃಗಗಳಿಗೆ ಹೋಲಿಸಿದರೆ ಕಾಜಿರಂಗದಲ್ಲಿ ಬೆಂಗಾಲ್ ಹುಲಿಗಳ ಕೂಡಾ ಅವುಗಳ ಜಾಗತಿಕ ಸಂಖ್ಯಾ ಸಾಂದ್ರತೆಯ ಪ್ರಕಾರ ಅತೀ ಹೆಚ್ಚು ಸಂಖ್ಯೆಯಲ್ಲಿದ್ದು (ನೂರು ಚದರ ಕಿಲೋ ಮೀಟರ್‌ಗೆ 12.72 ಅಥವಾ ನೂರು ಚದರ ಮೈಲಿಗಳಿಗೆ 33) ಇವುಗಳನ್ನು ಬೇಟೆಯಾಡುವುದು ಬಹಳ ಕಷ್ಟವಾಗಿರುವ ಕಾರಣ ಬೇಟೆಗಾರರು ಅವುಗಳತ್ತ ಆಸಕ್ತಿವಹಿಸಿಲ್ಲ. ಘೇಂಡಾಮೃಗಗಳು ಇಲ್ಲಿ ಅತೀ ಹೆಚ್ಚಿರುವ ಮತ್ತು ಸುಲಭದಲ್ಲಿ ಬೇಟೆಯಾಡಬಹುದಾದ ಕಾರಣದಿಂದಲೇ ಹುಲಿಗಳು ಇಷ್ಟು ಸುರಕ್ಷಿತವಾಗಿವೆ.
‘‘ಖಡ್ಗಮೃಗವನ್ನು ಹತ್ಯೆ ಮಾಡಲು ಸ್ವಲ್ಪ ಪರಿಣತಿ ಮತ್ತು ಸಮಯದ ಅಗತ್ಯವಿರುತ್ತದೆ’’ ಎಂದು ಶರ್ಮಾ ಹೇಳುತ್ತಾರೆ. ‘‘ಒಮ್ಮೆ ಪತ್ತೆ ಮಾಡಿದ ನಂತರ ಘೇಂಡಾಮೃಗವನ್ನು ಸುಲಭವಾಗಿ ಬೇಟೆಯಾಡಬಹುದು ಮತ್ತು ಪಾಯಿಂಟ್ ಬ್ಲಾಂಕ್ (10 ಅಡಿ ದೂರದಿಂದಲೂ) ರೇಂಜ್‌ನಲ್ಲೂ ಗುಂಡು ಹಾರಿಸಬಹುದು.
ಹೀಗೆ ಅವುಗಳ ಕೊಂಬನ್ನು ಪಕ್ಕನೆ ಕೀಳಲು ಸಾಧ್ಯವಾಗುತ್ತದೆ ಮತ್ತು ನಿಮಿಷಗಳ ಒಳಗೆ ಬೇಟೆಗಾರರು ಎಲ್ಲಾ ಕೆಲಸವನ್ನು ಮುಗಿಸಿ ತಮಗೆ ಬೇಕಾದುದನ್ನು ಕಿತ್ತು ಕೊಂಡೊಯ್ಯಲು ಸಾಧ್ಯವಾಗುತ್ತದೆ.’’ ಎನ್ನುತ್ತಾರೆ ಶರ್ಮಾ.
ಕಠಿಣ ಯುದ್ಧ
ಸದಾ ಇರುವ ಬೇಟೆಗಾರರ ಹಾವಳಿಯ ಮಧ್ಯೆಯೂ ಕಾಜಿರಂಗದ ಅರಣ್ಯ ಸಿಬ್ಬಂದಿ ಈ ಬೃಹತ್ ಪ್ರಾಣಿಗಳನ್ನು ರಕ್ಷಿಸಲು ಕಠಿಣ ಯುದ್ಧವನ್ನೇ ಮಾಡುತ್ತಿದ್ದಾರೆ. ಉದ್ಯಾನವನದ ಕ್ಷೇತ್ರ ನಿರ್ದೇಶಕ ಸಿಂಗ್ ಹೇಳುವಂತೆ ಅರಣ್ಯ ರಕ್ಷಕರು ಮತ್ತು ಇತರ ಸಿಬ್ಬಂದಿಯೊಂದಿಗೆ 1,247 ಜನರಿರುವ ಬೇಟೆ ನಿಗ್ರಹ ತಂಡವು ತಮ್ಮ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಹಗಲು ರಾತ್ರಿ ಕಾವಲು ಕಾಯುವ ಈ ತಂಡದ ಸದಸ್ಯರು ಕಾಲ್ನಡಿಗೆ, ಆನೆಗಳ ಮೇಲೆ, ವಾಹನಗಳಲ್ಲಿ ಮತ್ತು ಬೋಟ್‌ಗಳಲ್ಲಿ ಉದ್ಯಾನವನದ ಸುತ್ತು ಹೊಡೆಯತ್ತಲೇ ಇರುತ್ತಾರೆ. ಎರಡು ಬೆಲ್ಜಿಯನ್ ಮೆಲಿನಾಯ್ಸಿ ನಾಯಿಗಳು ಮತ್ತು ಅವುಗಳ ತರಬೇತುದಾರರು ಕೂಡಾ ಈ ತಂಡದ ಸದಸ್ಯರಾಗಿದ್ದಾರೆ. ಈ ಉದ್ಯಾನವನದಲ್ಲಿ 178 ಬೇಟೆ ನಿಗ್ರಹ ಶಿಬಿರಗಳಿದ್ದು ಅವುಗಳಲ್ಲಿ ಬ್ರಹ್ಮಪುತ್ರ ಮತ್ತು ಅದರ ಉಪನದಿಗಳ ಮೇಲೆ ತೇಲಾಡುವ ಶಿಬಿರಗಳೂ ಸೇರಿವೆ. ಪಾರ್ಕ್ ಸುತ್ತ ಪ್ರತಿಕ್ಷಣ ಕಣ್ಣಿಡುವ ಸಲುವಾಗಿ ವಿದ್ಯುತ್ ಕಣ್ಣುಗಳಾದ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
2016ರಲ್ಲಿ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ನಡೆಸಿದ ಜಂಟಿ ಕಾರ್ಯಾಚರಣೆಗಳಲ್ಲಿ 64 ಬೇಟೆಗಾರರನ್ನು ಮತ್ತವರ ಸಹಾಯಕರನ್ನು ಬಂಧಿಸಲಾಗಿತ್ತು. ಸಿಂಗ್ ತಿಳಿಸುವಂತೆ ಇವರ ಪೈಕಿ ಐದು ಮಂದಿ ಎನ್‌ಕೌಂಟರ್ ವೇಳೆ ಮೃತಪಟ್ಟಿದ್ದರು. ತೀರಾ ಇತ್ತೀಚೆಗೆ ನಡೆದ ಬಂಧನವೆಂದರೆ ಡಿಸೆಂಬರ್ 27ರಂದು ಮಾಸ್ಟರ್‌ಮೈಂಡ್ ಎನ್ನಲಾದ ಚಂದನ್ ದಾಸ್ ಎಂಬಾತನನ್ನು ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ಬಂಧಿಸಲಾಗಿತ್ತು. ಮುಂದೆ ಈತನ ಹೇಳಿಕೆಯ ಆಧಾರದಲ್ಲಿ ಅಕ್ಟೋಬರ್ 2016ರಲ್ಲಿ ಬಿಸ್ವಂತ್ ರೇಂಜ್‌ನಲ್ಲಿ ಒಂದು ಖಡ್ಗಾಮೃಗವನ್ನು ಹತ್ಯೆ ಮಾಡಿದ ಆರೋಪದಲ್ಲಿ ಆತನ ಇಬ್ಬರು ಸಹಚರರನ್ನು ಬಂಧಿಸಲಾಯಿತು. ಒಂದು ಎ.303 ಕ್ಯಾಲಿಬರ್ ರೈಫಲ್‌ನ್ನು ಕೂಡಾ ವಶಪಡಿಸಿಕೊಳ್ಳಲಾಯಿತು.
ಇದೇ ವೇಳೆ ಅರಣ್ಯ ಇಲಾಖೆಯು ತನ್ನ ಬೇಟೆ ನಿಗ್ರಹ ವ್ಯವಸ್ಥೆಯನ್ನು ಉತ್ತಮಗೊಳಿಸಲು ಕೆಲವು ದೃಢ ಹೆಜ್ಜೆಗಳನ್ನು ಇಟ್ಟಿತು. ಕಳೆದ ತಿಂಗಳು ರಾಜ್ಯ ಅರಣ್ಯ ಸಚಿವೆ ಪ್ರಮೀಳಾ ರಾಣಿ ಬ್ರಹ್ಮಾ ಅವರ ಆದೇಶದ ಮೇರೆಗೆ ಕರ್ತವ್ಯದಲ್ಲಿ ನಿರ್ಲಕ್ಷ್ಯದ ಆರೋಪದಡಿ ಇಲಾಖೆ ಆರು ಅರಣ್ಯ ರಕ್ಷಕರನ್ನು ವಜಾಮಾಡಿತು. ವಜಾಗೊಂಡ ಸಿಬ್ಬಂದಿಯನ್ನು ಈ ಮೊದಲು ಡಿಸೆಂಬರ್ 22ರಂದು ಬೇಟೆ ನಡೆದಿದ್ದ ಬಗೋರಿ ಪ್ರದೇಶದಲ್ಲಿರುವ ಅಮ್ಕತನಿ ಮತ್ತು ದಫ್ಲಂಗ್ ಬೇಟೆ ನಿಗ್ರಹ ಶಿಬಿರಗಳಲ್ಲಿ ನಿಯೋಜಿಸಲಾಗಿತ್ತು.
2016ರ ಜುಲೈ ಮತ್ತು ಆಗಸ್ಟ್‌ನಲ್ಲಿ ಮೂವರು ಅರಣ್ಯ ಸಿಬ್ಬಂದಿಯನ್ನು ಕರ್ತವ್ಯಲೋಪ ಮತ್ತು ಬೇಟೆಗಾರರನ್ನು ಹಿಡಿಯಲು ವಿಫಲವಾದ ಕಾರಣ ನೀಡಿ ವಜಾಗೊಳಿಸಲಾಗಿತ್ತು.
‘‘ಕಾಜಿರಂಗ ರಾಷ್ಟ್ರೀಯ ಉದ್ಯಾನವನದನಲ್ಲಿ ಘೇಂಡಾಮೃಗಗಳ ಬೇಟೆಗೆ ಇನ್ನೊಂದು ಆಯಾಮವಿದೆ’’ ಹೀಗೆಂದು ಹೇಳುತ್ತಾರೆ ಉದ್ಯಾನವನ ಮತ್ತದರ ಸುತ್ತಮುತ್ತಲಿನ ಆಗುಹೋಗುಗಳ ಮೇಲೆ ಗಮನವಿಟ್ಟಿರುವ ಸ್ಥಳೀಯ ಪತ್ರಕರ್ತ ಉತ್ತಮ ಸೈಕಿಯಾ. ಉದ್ಯಾನವನದ ಸುತ್ತ 150ಕ್ಕೂ ಅಧಿಕ ಹಳ್ಳಿಗಳಿವೆ ಮತ್ತು ಇಲ್ಲಿನ ಸ್ಥಳೀಯ ಸಮುದಾಯಗಳ ಸಾಮಾಜಿಕ ಆರ್ಥಿಕ ದುಸ್ಥಿತಿ ಬೇಟೆಗೆ ಮತ್ತಷ್ಟು ಪ್ರಚೋದನೆ ನೀಡುತ್ತದೆ.
‘‘ಹತ್ತಿರದ ರಾಜ್ಯಗಳಾದ ನಾಗಾಲ್ಯಾಂಡ್ ಮತ್ತು ಮಣಿಪುರದಿಂದ ಆರು ಅಥವಾ ಏಳು ಜನರ ಗುಂಪುಗಳಲ್ಲಿ ಬೇಟೆಗಾರರು ಬರುತ್ತಾರೆ’’ ಎಂದು ಸೈಕಿಯಾ ವಿವರಿಸುತ್ತಾರೆ. ಈ ಹೊರಗಿನ ಜನರಿಗೆ ಉದ್ಯಾನವನದ ಭೂರಚನೆಯ ಬಗ್ಗೆ ಅರಿವಿರುವುದಿಲ್ಲ ಹಾಗಾಗಿ ಇವರು ಸ್ಥಳೀಯ ಸಮುದಾಯಗಳ ಜನರಲ್ಲಿ ಮಾರ್ಗದರ್ಶನ ಕೇಳುತ್ತಾರೆ. ಇದರಿಂದ ಸ್ಥಳೀಯರಿಗೆ ಸುಲಭದಲ್ಲಿ ಮತ್ತು ತುರ್ತಾಗಿ ಹಣ ಸಿಗುವುದರಿಂದ ಬಡ ಗ್ರಾಮಸ್ಥರು ಬೇಟೆಗಾರರಿಗೆ ಸಹಾಯ ಮಾಡುವಂತಾಗುತ್ತದೆ. ಇಂಥಾ ಘಟನೆಗಳು ಸಾಮಾನ್ಯವಾಗಿ ಹಬ್ಬಗಳ ಸಮಯದಲ್ಲಿ ನಡೆಯುತ್ತವೆ ಯಾಕೆಂದರೆ ಆಗ ಹಣದ ಅಗತ್ಯ ಹೆಚ್ಚಿರುತ್ತದೆ ಎಂದು ತಿಳಿಸುತ್ತಾರೆ ಸೈಕಿಯಾ.
2016ರ ಸೆಪ್ಟಂಬರ್‌ನಲ್ಲಿ ಉಚ್ಚ ನ್ಯಾಯಾಲಯದ ಆದೇಶದಂತೆ ಅಸ್ಸಾಂ ಸರಕಾರ ಕಾಜಿರಂಗ ಉದ್ಯಾನದ ಗಡಿಭಾಗದಲ್ಲಿರುವ ಬಂದರ್‌ಡುಬಿ, ದೆವ್ಚರ್ ಚಾಂಗ್ ಮತ್ತು ಪಲ್ಕೋವಾ-ಈ ಮೂರು ಹಳ್ಳಿಗಳ ಸುಮಾರು 350 ಕುಟುಂಬಗಳನ್ನು ತೆರವುಗೊಳಿಸಿತ್ತು. ವರದಿಗಳಲ್ಲಿ ತೆರವುಗೊಳಿಸಲಾದ ಕುಟುಂಬಗಳು ಉದ್ಯಾನದ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಯೂರಿರುವ ಬಾಂಗ್ಲಾದೇಶಿ ನುಸುಳುಕೋರರು ಎಂದು ತಿಳಿಸಲಾಗಿತ್ತು.
ಈ ಅಭಿಯಾನದ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಓರ್ವ ಪುರುಷ ಮತ್ತು ಒಬ್ಬ ಮಹಿಳೆ ಮೃತಪಟ್ಟು ಬಹಳಷ್ಟು ಮಂದಿ ಗಾಯಗೊಂಡಿದ್ದರು. ತೆರವು ಕಾರ್ಯಾಚರಣೆಯನ್ನು ಮಾನವಹಕ್ಕು ಕಾರ್ಯಕರ್ತರು ಮತ್ತು ವಿರೋಧ ಪಕ್ಷಗಳು ಅಮಾನವೀಯ ಎಂದು ಖಂಡಿಸಿದವು ಮತ್ತು ರಾಷ್ಟ್ರೀಯ ಮತ್ತು ಅಸ್ಸಾಂ ರಾಜ್ಯ ಮಾನವಹಕ್ಕು ಆಯೋಗವು ರಾಜ್ಯ ಸರಕಾರದ ವಿರುದ್ಧ ನೋಟಿಸ್ ಜಾರಿ ಮಾಡಿದವು. ಆದರೆ ಸರಕಾರಕ್ಕೆ ಅರಣ್ಯಾಧಿಕಾರಿಗಳು ಮತ್ತು ಸ್ಥಳೀಯ ಪರಿಸರವಾದಿಗಳ ಬೆಂಬಲವಿತ್ತು.
‘‘ಇಂತಹ ಕ್ರಮಗಳು ಬೇಟೆಯ ಹಾವಳಿಯನ್ನು ನಿಯಂತ್ರಿಸಲು ಸಹಕಾರಿಯಾಗಿವೆ’’ ಎಂದು ಅಸ್ಸಾಂ ಮೂಲದ ಪರಿಸರವಾದಿ ಮತ್ತು ಅಸ್ಸಾಂನ ಮಾನಸ ರಾಷ್ಟ್ರೀಯ ಉದ್ಯಾನಕ್ಕೆ ನೀಡಿದ ಕೊಡುಗೆಗಾಗಿ ಐಯುಸಿಎನ್ ಪಾರಂಪರಿಕ ಹೀರೊ ಪ್ರಶಸ್ತಿ ಪಡೆದಿರುವ ಬಿಬುತಿ ಲಹ್ಕರ್ ತಿಳಿಸುತ್ತಾರೆ. ‘‘ಅಭಿವೃದ್ಧಿಯ ಓಟದಲ್ಲಿ ನಮ್ಮ ಅರಣ್ಯಗಳು ಮತ್ತು ವನ್ಯಜೀವಿಗಳು ನಿಧಾನವಾಗಿ ಸಂರಕ್ಷಿತ ಪ್ರದೇಶಗಳಿಗಷ್ಟೇ ನಿಬರ್ಂಧಿಸಲ್ಪಡುತ್ತಿವೆ. ಹಾಗಾಗಿ ಈ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವವರನ್ನು ತೆರವುಗೊಳಿಸುವುದು ಸದ್ಯ ಇರುವ ಪ್ರಾಣಿ ಮತ್ತು ಸಸ್ಯಸಂಕುಲಗಳ ಹಿತಾಸಕ್ತಿಗೆ ಸ್ವಾಗತಾರ್ಹ ಕ್ರಮ’’ ಎಂದವರು ಹೇಳುತ್ತಾರೆ. ಮತ್ತು ‘‘ಇಲ್ಲಿ ಒಕ್ಕಲೆಬ್ಬಿಸಲಾದ ಜನರು ಬಾಂಗ್ಲಾದೇಶಿಗಳಾದ ಕಾರಣ ಅವರಿಗೆ ಕಾಜಿರಂಗ ಅಥವಾ ಘೇಂಡಾಮೃಗಗಳ ಬಗ್ಗೆ ಅಷ್ಟೊಂದು ಬಾಂಧವ್ಯ ಇರುವುದಿಲ್ಲ’’ ಎಂದವರು ವಿವರಿಸುತ್ತಾರೆ.
ಈ ಎಲ್ಲಾ ಸವಾಲುಗಳು ಸಾಕಾಗದೆಂಬಂತೆ ನಿಷೇಧಿತ ದಂಗೆಕೋರ ಗುಂಪುಗಳು ಕೂಡಾ ಈ ಬೇಟೆಯಲ್ಲಿ ಭಾಗಿಯಾಗಿರುವುದು ಈ ಕಾರ್ಯವನ್ನು ಮತ್ತಷ್ಟು ಜಟಿಲಗೊಳಿಸುತ್ತದೆ. ಭಾರತದ ಈಶಾನ್ಯ ರಾಜ್ಯಗಳು ಹಲವು ಸಶಸ್ತ್ರ ಪ್ರತ್ಯೇಕವಾದಿ ಮತ್ತು ದಂಗೆಕೋರ ಗುಂಪುಗಳಿಗೆ ಆವಾಸಸ್ಥಾನವಾಗಿದೆ. ‘‘ಬೇಟೆಯಲ್ಲಿ ಎಕೆ-47 ಮತ್ತಿತರ ಅತ್ಯಾಧುನಿಕ ಅಸ್ತ್ರಗಳ ಬಳಕೆ ಇದಕ್ಕೆ ಸಾಕಷ್ಟು ಪುರಾವೆಯನ್ನು ಒದಗಿಸುತ್ತದೆ’’ ಎನ್ನುತ್ತಾರೆ ಕಾಜಿರಂಗದ ಸಿಂಗ್.







